ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ಐಕಾನಿಕ್ ನೀಲಿ ಬಣ್ಣದ ಹಕ್ಕಿ ಇದೀಗ ಮಾಯವಾಗಿದ್ದು, ಎಕ್ಸ್ (X) ಲೋಗೋ ಕಾಣಿಸಿಕೊಳ್ಳುತ್ತಿದೆ. ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ನ ಪ್ರಧಾನ ಕಚೇರಿಯಲ್ಲಿ ಎಕ್ಸ್ ಬ್ರ್ಯಾಂಡಿಂಗ್‌ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಎಲೋನ್ ಮಸ್ಕ್ ಭಾನುವಾರ ಟ್ವಿಟ್ಟರ್‌ನ ಲೋಗೋ ಬದಲಾವಣೆ ಬಗ್ಗೆ ಸುಳಿವು ನೀಡಿದ್ದರು. ನಾವು ಶೀಘ್ರವೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಹಾಗೂ ಎಲ್ಲಾ ಹಕ್ಕಿಗಳಿಗೂ ವಿದಾಯ ಹೇಳಬೇಕಿದೆ ಎಂದು ತಿಳಿಸಿ ದೊಡ್ಡ ಬಾಂಬ್ ಇಟ್ಟಿದ್ದರು. ಮಸ್ಕ್ ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ ಹೇಳುವ ಬಗೆಗಿನ ಟ್ವೀಟ್‌ನಿಂದಾಗಿ ಅವರು ಆ್ಯಪ್ ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದು ದೃಢಪಟ್ಟಿತು. ಈ ಹಿಂದೆಯೇ Twitter Inc. ಅನ್ನು X Corp. ನೊಂದಿಗೆ ವಿಲೀನ ಮಾಡಲಾಗಿದೆ. ಇದೀಗ ಟ್ವಿಟ್ಟರ್‌ನ ಲೋಗೋ ಬದಲಾಗಿದೆ. ಮಂದೆ ಟ್ವಿಟ್ಟರ್ ಎಕ್ಸ್ ಹೆಸರಿನಲ್ಲಿಯೇ ಮುಂದುವರಿಯಲಿದೆ.
ಇದೀಗ ನೀವು X.com ಎಂದು ಟೈಪ್ ಮಾಡಿದರೆ ಟ್ವಿಟರ್ ಪೇಜ್ ತೆರೆಯುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಆದಾಗ್ಯೂ, ವೆಬ್‌ಸೈಟ್ ಇನ್ನೂ Twitter.com ಅನ್ನು ಪ್ರಾಥಮಿಕ ಡೊಮೇನ್ ಆಗಿ ಬಳಸುತ್ತಿದೆ. ಸಾಮಾನ್ಯವಾಗಿ ಮಸ್ಕ್ ಅವರ ಪೋಸ್ಟ್ಗೆ ಟ್ವಿಟ್ಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಅದು ಈ ಬಾರಿ ಕೂಡ ಮುಂದುವರೆದಿದೆ, ಕೆಲವರು ಈ ನೂತನ ಬದಲಾವಣೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು “#GoodbyeTwitter” ಎಂದು ಬರೆದು ಹಳೆಯ ಲೋಗೋವನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.




























