ಕಾರ್ಕಳ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾರ್ಕಳ – 94.2 ಮಿ.ಮೀ., ಇರ್ವತ್ತೂರು – 104.02 ಮಿ.ಮೀ., ಅಜೆಕಾರು – 74.04 ಮಿ.ಮೀ., ಸಾಣೂರು – 108.06 ಮಿ.ಮೀ., ಕೆದಿಂಜೆ – 98.02 ಮಿ.ಮೀ., ಮುಳಿಕ್ಕಾರು -144.08 ಮಿ.ಮೀ., ಕೆರ್ವಾಶೆ – 115.08 ಮಿ.ಮೀ. ಮಳೆಯಾಗಿದೆ. ಮುಳಿಕ್ಕಾರು ಭಾಗದಲ್ಲಿ ಗರಿಷ್ಠ ಮಳೆ ಪ್ರಮಾಣ ದಾಖಲಾಗಿದ್ದರೆ, ಅಜೆಕಾರು ಪರಿಸರದಲ್ಲಿ ಕನಿಷ್ಠ 74.04 ಮಿ.ಮೀ. ಮಳೆಯಾಗಿದೆ.
4 ಲ. ರೂ. ಅಧಿಕ ನಷ್ಟ
ಗಾಳಿ ಮಳೆಯ ಪರಿಣಾಮವಾಗಿ ವಿವಿಧೆಡೆ ಮನೆಗೆ ಮರ ಬಿದ್ದು ಹಾನಿ, ಮನೆ ಗೋಡೆ ಕುಸಿತ, ಕೃಷಿ ಭೂಮಿ ಹಾನಿ, ರಸ್ತೆಗೆ ಮರ ಬಿದ್ದಿರುವ ಘಟನೆಗಳು ಸಂಭವಿಸಿದೆ. ಕಳೆದ ಒಂದು ವಾರದಲ್ಲಿ ಮಳೆಯಿಂದಾಗಿ ತಾಲೂಕಿನಲ್ಲಿ 4 ಲಕ್ಷ ರೂ. ಗಿಂತಲೂ ಅಧಿಕ ನಷ್ಟ ಉಂಟಾಗಿದೆ.
ಮಳೆ ಹಾನಿ
ಜು. 24 ರಂದು ಸುರಿದ ಮಳೆಗೆ ನಿಟ್ಟೆ ಗ್ರಾಮದ ಬಾಳೆಹಿತ್ಲು ಅಮಿತಾ ಅವರ ಮನೆ ಮಳೆಯಿಂದ ಕುಸಿದಿದ್ದು ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ. ಬೋಳ ಕೆಂಪು ಜೋರಾ ಸುಮತಿ ಪೂಜಾರಿಯವರ ಮನೆಯ ಗೋಡೆ ಬಿದ್ದು ಅಂದಾಜು 10 ಸಾವಿರ ರೂ. ನಷ್ಟ ಸಂಭವಿಸಿದೆ. ಪಳ್ಳಿ ಒಳಂಬಳ ಯಶೋಧ ಅವರ ಮನೆಯ ಗೋಡೆ ಕುಸಿದು ಬಿದ್ದು ಅಂದಾಜು 35 ಸಾವಿರ ರೂ. ನಷ್ಟ ಉಂಟಾಗಿದೆ. ಮುಂಡ್ಕೂರು ಗ್ರಾಮದ ಬೇಬಿ ಪೂಜಾರಿ ಅವರ ಮನೆಗೆ ಮರ ಬಿದ್ದು ಅಂದಾಜು 20 ಸಾವಿರ ರೂ. ಹಾನಿಯಾಗಿದೆ. ಬೇಬಿ ಶೆಟ್ಟಿಯವರ ಮನೆಗೆ ಮರ ಬಿದ್ದು 15 ಸಾವಿರ ರೂ. ನಷ್ಟ ಸಂಭವಿಸಿದೆ. ಎರ್ಲಪಾಡಿ ಗ್ರಾಮದ ಪವಿತ್ರ ಅವರ ಮನೆಯ ಸ್ನಾನದ ಮನೆ ಹಾನಿಗೀಡಾಗಿದ್ದು, ಅಂದಾಜು 10 ಸಾವಿರ ರೂ. ನಷ್ಟ ಉಂಟಾಗಿದೆ. ಮಾಳ ಗ್ರಾಮದ ಕರಿಯ ಮೂಲ್ಯ ಅವರ ತೋಟದ 100 ಅಡಿಕೆ ಮರ ಗಾಳಿ ಮಳೆಗೆ ಹಾನಿಯಾಗಿದ್ದು ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದೆ. ಈದು ಗ್ರಾಮದ ಅಶೋಕ್ ಕುಮಾರ್ ಜೈನ್ ಅವರ ತೋಟದ 35 ಅಡಿಕೆ ಮರಗಳು ಹಾನಿಗೀಡಾಗಿದ್ದು, ಅಂದಾಜು 35 ಸಾವಿರ ರೂ. ನಷ್ಟ ಸಂಭವಿಸಿದೆ. ಕಣಂಜಾರು ಗ್ರಾಮದ ಕುರುಂಬಿಲ ಪೂಜಾರಿಯವರ ಗದ್ದೆಯಲ್ಲಿ ಬಿತ್ತಿದ ಬೀಜ ಕೊಚ್ಚಿ ಹೋಗಿ ಅಂದಾಜು 5 ಸಾವಿರ ರೂ. ನಷ್ಟ ಉಂಟಾಗಿದೆ. ದುರ್ಗಾ ಮಲೆಬೆಟ್ಟು ಶ್ರೀದೇವಿ ಅವರ ತೋಟದ 20 ಅಡಿಕೆ ಮರಗಳು ಹಾನಿಗೀಡಾಗಿದ್ದು, ಅಂದಾಜು 10 ಸಾವಿರ ರೂ. ನಷ್ಟ ಸಂಭವಿಸಿದೆ.
































