ಮೋಸದಿಂದ ಮೂವರ ನಾಮಪತ್ರ ಹಿಂತೆಗೆತ: ಬಿಜೆಪಿ ಬೆಂಬಲಿತರ ಆರೋಪ
ಹೆಬ್ರಿ : ಶಿವಪುರ ಹಾಲು ಉತ್ಪಾದಕರ ಸಂಘದ ಚುನಾವಣೆ ಜು.29ರಂದು ನಡೆಯಲಿದ್ದು, ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಆದರೆ ಬಿಜೆಪಿ ಬೆಂಬಲಿತ ಮೂವರು ಅಭ್ಯರ್ಥಿಗಳು ನಾಮಪತ್ರ ಹಿಂದೆಗೆದುಕೊಂಡಿದ್ದು, ವಿರೋಧ ಪಕ್ಷದವರು ಮೋಸದಿಂದ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ.
ಶಿವಪುರ ಡೈರಿಯಲ್ಲಿ 13 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಚೀಂಕ್ರ ಎಂಬ ಕಾಂಗ್ರೆಸ್ ಬೆಂಬಲಿತರು ಅವಿರೋಧ ಸದಸ್ಯರಾಗಿದ್ದಾರೆ. ಉಳಿದಂತೆ 7 ಸಾಮಾನ್ಯ, 2 ಮಹಿಳಾ ಮೀಸಲು, 1 ಪರಿಶಿಷ್ಟ ಪಂಗಡ, 1 ಹಿಂದುಳಿದ ವರ್ಗ (2ಎ) ಮತ್ತು 1 – 3ಬಿ ವಿಭಾಗಕ್ಕೆ ಎರಡೂ ಪಕ್ಷದ ಬೆಂಬಲಿತರು ನಾಮಪತ್ರ ಸಲ್ಲಿಸಿದ್ದಾರೆ.

ಮೋಸದಿಂದ ನಾಮಪತ್ರ ಹಿಂತೆಗೆತ
ಬಿಜೆಪಿ ಬೆಂಬಲಿತ ಕುಲಾಲ್ ಸಮುದಾಯಕ್ಕೆ ಸೇರಿದ ಇಬ್ಬರು ಮತ್ತು ಕುಡುಬಿ ನಾಯ್ಕ್ ಸಮುದಾಯಕ್ಕೆ ಸೇರಿದ ಓರ್ವ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವಂತೆ ವಿರೋಧ ಪಕ್ಷದವರು ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಇವರನ್ನು ಯಾವುದೋ ಸಹಿ ಹಾಕಲು ಇದೆ ಎಂದು ಡೈರಿಗೆ ವಿರೋಧ ಪಕ್ಷದವರು ಕರೆದುಕೊಂಡು ಹೋಗಿ ಅವರಿಂದ ಸಹಿ ಪಡೆದು ನಾಮಪತ್ರ ಹಿಂದೆ ಪಡೆಯುವಂತೆ ಮಾಡಿದ್ದಾರೆ. ಇದಕ್ಕೆ ಡೈರಿಯ ಕಾರ್ಯನಿರ್ವಾಹಕರು ಸಹಕರಿಸಿದ್ದಾರೆ ಎಂದು ಬಿಜೆಪಿ ಬೆಂಬಲಿತರು ಆರೋಪಿಸಿದ್ದಾರೆ.
ಕಾನೂನು ಹೋರಾಟ ನಡೆಸುತ್ತೇವೆ
ಇದೀಗ ಮೂವರು ನಾಮಪತ್ರ ಹಿಂತೆಗೆದಿರುವುದರಿಂದ ಕೇವಲ 9 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಜು. 29ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ ಆ ಬಳಿಕ ಕಾನೂನಿನ ಹೋರಾಟ ನಡೆಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಈ ರೀತಿಯ ಕೃತ್ಯ ಎಸಗಿರುವ ವಿರೋಧ ಪಕ್ಷದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಬೆಂಬಲಿತ ಸ್ಪರ್ಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.









































