ರಾಜ್ಯಾದ್ಯಂತ ಮಳೆ ಹಿನ್ನೆಲೆ : ಕಳಸ-ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ : ಕುಕ್ಕೆ ಸುಬ್ರಹ್ಮಣ್ಯ ಕುಮಾರಾಧಾರ ಸ್ನಾನಘಟ್ಟ ಮುಳುಗಡೆ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೆಲ್ಲೀಬಿಡು ಸೇತುವೆ ಮುಳುಗಡೆಯಾಗಿದೆ. ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಕಳಸದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಬಂದ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರವಾಹದ ಮಟ್ಟ ಮೀರಿ ಜಾಂಬಳೆ ಹೊಳೆ ಹರಿಯುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರ ಸ್ನಾನಘಟ್ಟ ಮುಳುಗಡೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ನದಿ ಬದಿಗೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆ ನೀಡಲಾಗಿದೆ.

ಬಾಳೆಹೊನ್ನೂರು : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ ಬಾಳೆಹೊನ್ನೂರು-ಕಳಸ ಮಾರ್ಗ‌ ಮಧ್ಯೆ ತೆಪ್ಪದಗಂಡಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಭಾರೀ ಗಾತ್ರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಸ್ಥಳೀಯರು ಹಾಗೂ ಯಾತ್ರಿಕರ ಪರಿಶ್ರಮದಲ್ಲಿ ತೆರವು ಕಾರ್ಯಾಚಾರಣೆ ನಡೆಸಿ ಕ್ರೇನ್ ಮುಖಾಂತರ ರಸ್ತೆಗೆ ಬಿದ್ದ‌ ಎರಡು ಮರಗಳನ್ನು ತೆರವುಗೊಳಿಸಿದರು.ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ನೆಲಕ್ಕುರುಳಿದವು.ಮೆಸ್ಕಾಂ ನ ಸಿಬ್ಬಂದಿಗಳು ಈಗಾಗಲೇ ಧಾವಿಸಿದ್ದಾರೆ.

ಖಾನಾಪುರದ ಕಣಕುಂಬಿಯಲ್ಲಿ ದಾಖಲೆ ಮಳೆ
ಬೆಳಗಾವಿ ಜಿಲ್ಲೆ ಖಾನಾಪುರದ ಕಣಕುಂಬಿಯಲ್ಲಿ ದಾಖಲೆ ಮಳೆಯಾಗಿದೆ. ನಿತ್ಯ 200-235 ಮಿ‌ಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತುಂಬಿ ಹರಿಯುತ್ತಿದೆ. ಕಳಸಾ ನಾಲಾ ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ರಾಜ್ಯದ ಮಲಪ್ರಭಾ ನದಿ ಸೇರಬೇಕಿದ್ದ ಅಪಾರ ನೀರು ವ್ಯರ್ಥವಾಗಿದೆ. ನದಿ ಸೇರಬೇಕಿದ್ದ ನೀರು ಗೋವಾ ಮೂಲಕ ಸಮುದ್ರ ಸೇರಿ ವ್ಯರ್ಥವಾಗಿದೆ. ಅಪೂರ್ಣಗೊಂಡ ಕಾಮಗಾರಿ ಜಾಗದಲ್ಲೇ ನೀರು ಧುಮ್ಮಿಕ್ಕುತ್ತಿದೆ.

ಹಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿದಿತ್ತು. ಪರಿಣಾಮ ಜಿಲ್ಲೆ 15 ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. 

ಭದ್ರಾ ನದಿ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆ
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹದ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಭದ್ರಾ ನದಿ ಅಬ್ಬರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೆಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೇಮಾವತಿ, ತುಂಗಾ ಭದ್ರಾ ನದಿಗಳಲ್ಲೂ ಒಳಹರಿವು ಹೆಚ್ಚಳವಾಗಿದೆ.

ಮಳೆನೀರು ತುಂಬಿದ್ದ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರ ಸಾವು
ಕಲಬುರಗಿ ‌ನಗರದ ದುಬೈ ಕಾಲೋನಿಯಲ್ಲಿ ಮಳೆನೀರು ತುಂಬಿದ್ದ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತೆಗೆದಿದ್ದ ತಗ್ಗುಗುಂಡಿಗೆ ಬಿದ್ದು ಅಭಿ(11), ಅಜಯ್(12) ಸಾವನ್ನಪ್ಪಿದ್ದಾರೆ. ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಚೌಕ್ ಪೊಲೀಸರು ಭೇಟಿ ನೀಡಿ ಓರ್ವ ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಮತ್ತೊಬ್ಬ ಬಾಲಕನ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಲವು ಕಡೆ ಮರ, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮತ್ತಷ್ಟು ಚುರುಕಾಗಿದೆ. ಇದರಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಚಿಕ್ಕಮಗಳೂರು ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಹಾನಿ ಹಿನ್ನೆಲೆ ಮಳೆ ಹಾನಿ ಪ್ರದೇಶಗಳಿಗೆ ಇಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಲಿದ್ದಾರೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಮಳೆ ಹಾನಿ ಪರಿಶೀಲನೆ ನಡೆಸಿ ಮನೆ ಹಾನಿ, ಶಿಥಿಲವಾದ ಸೇತುವೆ, ಭೂಕುಸಿತ ಪ್ರದೇಶ ವೀಕ್ಷಿಸಲಿದ್ದಾರೆ. ಕಳೆದ ವರ್ಷ ಹಾನಿಯಾಗಿದ್ದ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಭೋರ್ಗರೆದು ಹರಿಯುತ್ತಿದೆ ನೇತ್ರಾವತಿ ನದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ಧರ್ಮಸ್ಥಳದ ನೇತ್ರಾವತಿ ನದಿ ಭೋರ್ಗರೆದು ಹರಿಯುತ್ತಿದ್ದು, ನದಿ ನೀರಿನ ಮಟ್ಟ ಏರಿಕೆ ಹಿನ್ನಲೆ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯ ಭೀತಿ ಎದುರಾಗಿದೆ. ಅಪಾಯದ ಹಿನ್ನಲೆ ನದಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಯಾತ್ರಿಗಳು ಎಚ್ಚರಿಕೆಯನ್ನೂ ಲೆಕ್ಕಿಸದೆ ನದಿಗಿಳಿಯುತ್ತಿದ್ದಾರೆ.  

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಭೂಕುಸಿತ ಉಂಟಾಗಿದೆ. ನಿರ್ಮಾಣ ಹಂತದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಹೆದ್ದಾರಿ ಅಕ್ಕಪಕ್ಕದ ಪ್ರದೇಶದಲ್ಲಿ ಭೂಕುಸಿತದಿಂದ ಆತಂಕ ಹೆಚ್ಚಿದೆ. ದೋಣಿಗಲ್ ಸಮೀಪದ ದರ್ಗಾಬಳಿ‌ ರಸ್ತೆ ಕುಸಿಯುತ್ತಿದೆ.



















































































error: Content is protected !!
Scroll to Top