ಮೊಬೈಲ್‌, ಬೈಕ್‌ ಮತ್ತು ಯುವ ಜನಾಂಗ…

ವೇಗದ ಬದುಕಿನ ಧಾವಂತದಲ್ಲಿ ಕಳೆದು ಹೋದ ನಾವು

ದಿನ ಬೆಳಗಾದರೆ ಆತ್ಮಹತ್ಯೆ, ರಸ್ತೆ ಅಪಘಾತ, ಹೃದಯಾಘಾತ ಇವೇ ಸುದ್ದಿಗಳು. ಯಾವುದೇ ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣ ನೋಡಿದರೆ ಇಂಥ ಸುದ್ದಿಗಳೇ ತುಂಬಿಕೊಂಡಿರುತ್ತವೆ. ಇದು ಡಿಜಿಟಲ್‌ ಯುಗ, ಇಲ್ಲಿ ಎಲ್ಲ ಫಾಸ್ಟ್‌ ಆಗಿ ಆಗಬೇಕು. ಫಾಸ್ಟ್‌ ಲೈಫ್‌, ಇನ್‌ಸ್ಟಂಟ್‌ ಫುಡ್‌ ಯುಗ ಅಂದರೆ ಇಂದಿನ ಪರಿಸ್ಥಿಯಲ್ಲಿ ಯಾರಿಗೂ ತಾಳ್ಮೆ ಇಲ್ಲದಿರುವುದೇ ಒಂದು ಕಾಯಿಲೆಯಾಗಿದೆ. ಎಲ್ಲ ಕ್ಷಿಪ್ರವಾಗಿ ಆಗಬೇಕು ಎನ್ನುವ ತುಡಿತ ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ನಾನಿರಬೇಕೆಂಬ ಹಪಾಹಪಿ ಇಂದಿನ ಯುವ ಜನಾಂಗದಲ್ಲಿದೆ. ಇದು ತಪ್ಪಲ್ಲ, ಆದರೆ ಇದಕ್ಕಾಗಿ ಅವರು ಅನುಸರಿಸುತ್ತಿರುವ ಹಾದಿ ಮಾತ್ರ ಕಳವಳವನ್ನುಂಟು ಮಾಡುತ್ತದೆ.

ಹಿಂದೆ ಅವಿಭಕ್ತ ಕುಟುಂಬವಿತ್ತು, ಅಲ್ಲಿ ಎಲ್ಲರಿಗೂ ಒಬ್ಬ ಯಜಮಾನ, ಆತನ ಬಗ್ಗೆ ಇರುವ ಗೌರವ ಭಯ ತೆಗೆದುಕೊಳ್ಳುವ ನಿರ್ಧಾರಗಳ ಕೂಲಂಕಷ ಚರ್ಚೆ ಇವೆಲ್ಲ ಇರುತ್ತಿತ್ತು. ಏನೇ ವಿಚಾರವಾದರೂ ಮನೆಯ ಹಿರಿಯರಿಂದ ಪ್ರಾರಂಭವಾಗಿ ಅವರಿಂದಲೇ ಕೊನೆಗೊಳ್ಳಬೇಕಿತ್ತು. ಆಗ ಇಂದಿನ ಹಾಗೆ ಮೊಬೈಲ್‌ ಇರಲಿಲ್ಲ. ಮೊಬೈಲ್‌ ಬಂದ ಬಳಿಕ ಡಿಜಿಟಲ್‌ ಕ್ರಾಂತಿಯಿಂದಾಗಿ ಎಲ್ಲವೂ ಬದಲಾಯಿತು. ಜತೆಗೆ ಅವಿಭಕ್ತ ಕುಟುಂಬವೂ ಹೋಯಿತು. ನಾವೀಗ 5ಜಿ ಯುಗಕ್ಕೆ ತಲುಪಿದ್ದೇವೆ. ಇದು ನಮ್ಮ ನಾಗಾಲೋಟ. ಬೇಕೆಂದರೂ ಇಲ್ಲಿಂದ ನಾವು ಹಿಂದಿರುಗಲಾರೆವು. ಎಲ್ಲರೊಂದಿಗೆ ನಾವು ಕೂಡ ಓಡುತ್ತಲೇ ಇರಬೇಕು. ನಿಂತರೆ ಹಿಂದುಳಿದು ಬಿಡುತ್ತೇವೆ ಎಂಬ ಆತಂಕ. ಈ ನಾಗಾಲೋಟದಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಮಾತ್ರ ನಮ್ಮತನವನ್ನು ಮತ್ತು ನಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು.

ಎಲ್ಲರೂ ಬಯಸುವುದು ಒಂದೆ ನನ್ನ ಮಗ/ಮಗಳು ಮುಂಚೂಣಿಯಲ್ಲಿರಬೇಕೆಂದು. ಪೋಷಕರು ಮಕ್ಕಳ ವಿದ್ಯಭ್ಯಾಸದ ಅನುಕೂಲಕ್ಕಾಗಿ ಮೊಬೈಲ್‌ ಫೋನ್‌ಗಳನ್ನು ಮಕ್ಕಳು ಉತ್ತಮ ಅಂಕ ಗಳಿಸಲು ಮೊಬೈಲ್‌ ಸಹಕಾರಿಯಾಗಬಹುದೆಂಬ ಆಸೆಯಿಂದ ಅದೆಷ್ಟೆ ವೆಚ್ಚವಾದರೂ ಖರೀದಿಸಿ ಕೊಡುತ್ತಾರೆ. ಆದರೆ ಕ್ರಮೇಣ ಮಕ್ಕಳು ಅಂಕ ಗಳಿಕೆಗೆ ಬದಲಾಗಿ ಜಾಲತಾಣದ ಆಸೆ-ಆಮಿಷಗಳಿಗೆ ಮರುಳಾಗಿ ಗೇಮಿಂಗ್‌, ರೀಲ್ಸ್‌ ಇತ್ಯಾದಿಗಳಿಗೆ ದಾಸರಾಗಿ ವಿದ್ಯಾಭ್ಯಾಸದ ಕಡೆಗೆ ಗಮನಕೊಡದೆ ತಮ್ಮದೇ ಲೋಕದಲ್ಲಿ ತಲ್ಲೀನರಾಗಿರುತ್ತಾರೆ. ಪೋಷಕರು ಮೊಬೈಲ್‌ ಬಳಸಲು ಅವಕಾಶ ನೀಡದಿರುವುದಕ್ಕೆ ಮಗ/ಮಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಅತಿ ವೇಗ ಅಪಾಯ ತಂದೊಡ್ಡುತ್ತಿದ್ದರು ದ್ವಿಚಕ್ರವಾಹನ, ಕಾರು ಮತ್ತು ಇತರೆವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಅಪಾಯ ತಂದೊಡ್ಡಿಕೊಳ್ಳುವುದು ನಿತ್ಯವೂ ಆಗುತ್ತಿರುತ್ತದೆ. ಮೊಬೈಲ್‌ ಮತ್ತು ಮೋಟಾರ್‌ಬೈಕ್‌ ಇಂದಿನ ಯುವ ಪೀಳಿಗೆಯ ಮೊದಲ ಶತ್ರುಗಳು ಎಂದು ಮಹನೀಯರೊಬ್ಬರು ಹೇಳಿರುವುದು ಇಂಥ ಘಟನೆಗಳನ್ನು ನೋಡುವಾಗ ನಿಜ ಎಂದೆನಿಸುತ್ತದೆ.

ಯುವ ಪೀಳಿಗೆಯ ಮನದಲ್ಲಿ ಈಗ ವೇಗಕ್ಕೆ ಒಗ್ಗಿಕೊಂಡಿದೆ. ಅವರಿಗೆ ಎಲ್ಲದರಲ್ಲೂ ಸ್ಪೀಡ್‌ ಬೇಕು. ಅದಕ್ಕೆ ತಕ್ಕ ಹಾಗೇ ರಣವೇಗದಲ್ಲಿ ಓಡುವ ಆಕರ್ಷಕ ಬೈಕ್‌ಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತವೆ. ಇಂಥ ಬೈಕ್‌ ಮೇಲೆ ಸವಾರಿ ಮಾಡುವಾಗ ಸಂಭವಿಸಿದ ಅಪಘಾತಗಳೇ ಯುವ ಜನಾಂಗದ ಪ್ರಾಣಕ್ಕೆ ಮುಳುವಾಗುತ್ತಿರುವುದು ಹೆಚ್ಚಿನ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಅತಿವೇಗದಿಂದ ಅಪಾಯ ಎಂದು ಅರಿವಿದ್ದರೂ ಯುವಪೀಳಿಗೆ ಚಿಂತಿಸದಿರುವುದು ವಿಪರ್ಯಾಸವೇ ಸರಿ. ಮತ್ತೊಂದೆಡೆ ಫಾಸ್ಟ್‌ ಫುಡ್‌ ಹಾವಳಿ, ಇನ್‌ಸ್ಟಂಟ್‌ ಆಹಾರ, ಪ್ಯಾಕೆಟ್‌ ಆಹಾರ ಇತ್ಯಾದಿಗಳು ಕೊಲೆಸ್ಟರಾಲ್‌ ಹೆಚ್ಚಿಸುತ್ತವೆ ಮತ್ತು ಇದರಿಂದಾಗಿ ತಾಳ್ಮೆ ಕ್ರಮೇಣ ಕಮ್ಮಿಯಾಗುತ್ತಾ ಬರುತ್ತದೆ. ಇದರಿಂದಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಇಷ್ಟೆಲ್ಲ ಆಗುತಿದ್ದರೂ ನಾವು ಆಹಾರ ಶೈಲಿಯಲ್ಲಿ ಬದಲಾವಣೆ ತಂದಿಲ್ಲ. ಎಲ್ಲವೂ ಬೇಕು ಹೌದು, ಯಾವುದೂ ಕೂಡ ಅತಿಯಾಗಿ ಬೇಡ. ಅತಿಯಾದರೆ ಅಮೃತವು ವಿಷವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.


ಜ್ಯೋತಿ ರಮೇಶ್‌



































































































error: Content is protected !!
Scroll to Top