ಕಾರ್ಕಳ : ಮುಂಬಯಿಯ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಶ್ರೀ ಭುವನೇಂದ್ರ ವಸತಿ ಶಾಲೆಯಲ್ಲಿ ಜು. 21 ಮತ್ತು 22 ರಂದು ನಾಯಕತ್ವ ತರಬೇತಿ ಶಿಬಿರ ನಡೆಯಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ನಾಯಕತ್ವ ಎಂಬುದು ಅಧಿಕಾರವಾಗದೆ, ಅಳವಡಿಕೆಯಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡಾಗ ಉತ್ತಮ ನಾಗರೀಕನಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಸುಚಿತ್ರ ಮಾತನಾಡಿ, ನಾಯಕನಾದವನಿಗೆ ಶಿಸ್ತು, ಸಮಯಪಾಲನೆಯೊಂದಿಗೆ ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಗುಣವಿರಬೇಕು ಎಂದರು. ವಿದ್ಯಾರ್ಥಿಗಳಾದ ಪ್ರಣಮ್ಯ, ಜೈ. ಆದಿತ್ಯ, ಆಯುಷ್ ಹಾಗೂ ಮಧು ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಸಂಸ್ಥೆಯ ಸಂಚಾಲಕ ಕೆ. ವೆಂಕಟೇಶ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾದ ರಾಜೀವ್ ಲೂ. ಹಾಗೂ ಕ್ಲಾರಿಸಾ ಜತ್ತನ್ನ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಲೆನೋರ ಡಿಸೋಜ ಹಾಗೂ ಯುವನ್ ಕಾರ್ಯಕ್ರಮ ನಿರೂಪಿಸಿದರು. ತನುಶ್ರೀ ವಂದಿಸಿದರು. ಅಶ್ವಿಜ್ ಸಹಕರಿಸಿದರು.































































