ಕಾರ್ಕಳ: ಬಸ್ಸಿನ ಪ್ರಯಾಣಿಕರೊಬ್ಬರಿಗೆ ಇನ್ನೊಂದು ಬಸ್ಸಿನ ಮಾಲಕ ಮತ್ತು ಚಾಲಕ ಬಸ್ಸಿನೊಳಗೆ ಹಲ್ಲೆ ಮಾಡಿರುವ ಘಟನೆ ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ. ಮೂಡುಬಿದಿರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿರುವ ಹಿರಿಯಡ್ಕ ಸರ್ಕಾರಿ ಕಾಲೇಜಿನ ಬಳಿಯ ನಿವಾಸಿ ಎಚ್.ಅರುಣ್ ಕುಮಾರ್ (52) ಹಲ್ಲೆಗೊಳಗಾದವರು. ಅರುಣ್ ಕುಮಾರ್ ಗುರುವಾರ ಹಿರಿಯಡ್ಕದಿಂದ ಎಚ್‌ಟಂಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಜಾರ್ಕಳದಲ್ಲಿ ಎಸ್‌ವಿಟಿ ಬಸ್‌ನವರು ಟಡ್ಡ ಇಟ್ಟು ಸಮಯದ ವಿಚಾರದಲ್ಲಿ ಜಗಳವಾಡಿದ್ದಾರೆ. ಈ ಸಂದರ್ಭ ಅರುಣ್ ಕುಮಾರ್ ಅವರು ಇಳಿದು ಹೋಗಿ ಎಸ್‌ವಿಟಿ ಬಸ್ಸಿನವರಿಗೆ ನಿಮ್ಮ ತಕರಾರು ಇದ್ದರೆ ಪೊಲೀಸರಿಗೆ ದೂರು ನೀಡಿ ತೊಂದರೆ ಕೊಡಬೇಡಿ ಎಂದು ಹೇಳಿ ಮರಳಿ ಎಚ್‌ಎಂಟಿ ಬಸ್ ಹತ್ತಿದ್ದಾರೆ. ಬಸ್ ಬಂಡಿಮಠ ತಲುಪಿದಾಗ ಎಸ್ವಿಟಿ ಬಸ್ಸಿನವರು ಮತ್ತೆ ಟಡ್ಡ ಇಟ್ಟು ಎಚ್‌ಎಂಟಿ ಬಸ್ಸಿಗೆ ಹತ್ತಿ ಅರುಣ್ ಕುಮಾರ್ ಮೇಲೆ ಕೈಯಿಂದ ಹಲ್ಲೆ ಮಾಡಿದ್ದಾರೆ. ಅರುಣ್ ಕುಮಾರ್ ನೀಡಿದ ದೂರಿನ ಪ್ರಕಾರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಯಾಣಿಕನಿಗೆ ಬಸ್ಸಿನ ಮಾಲಕ, ಚಾಲಕನಿಂದ ಹಲ್ಲೆ









































