ಮಂಗಳೂರು : ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಜು. 21ರಂದು ತಿಳಿಸಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಬೆಚಾನ್ ಸೊನಾರ್(45) ಹಾಗೂ ಮಂಗಳೂರಿನ ಮನೋಹರ್ ಸೇಠ್ (49) ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಸೊನಾರ್, ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆನಂದ ಚೂರ್ಣ, ಮಹಾಶಕ್ತಿ ಮುನಾಕ್ಕಾ, ಬಮ್ ಬಮ್ ಮುನಾಕ್ಕಾ ವಾಟಿ ಮತ್ತಿತರ ಹೆಸರುಗಳಿಂದ ಮಾರಾಟ ಮಾಡಲಾಗುತ್ತಿದ್ದ ರೂ. 5,500 ಮೊತ್ತದ ಚಾಕೊಲೇಟ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮನೋಹರ್ ಎಂಬಾತ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ನಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ. ಅವರಿಂದ ಮೂರು ಬ್ಯಾಗ್ಗಳಲ್ಲಿ ಸಂಗ್ರಹವಾಗಿದ್ದ ರೂ. 48 ಸಾವಿರ ಮೊತ್ತದ ಚಾಕೊಲೇಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದರು. ಸಾಗಣೆದಾರರ ಜಾಲವನ್ನು ಭೇದಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.































































