ಕರಾವಳಿಯ ಕುಂದಾಪುರದ ಜನರ ಭಾಷಿ ಅಲ್ಲ ಬದ್ಕ್. ಕಡಲತೀರ ಕುಂದಾಪುರದಲ್ಲಿ ಕುಂದ ಕನ್ನಡದ ಸೊಬಗನ್ನು ಕಾಣಬಹುದು. ರಾಜ್ಯದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವ ಜನರಿದ್ದಾರೆ. ಆಯಾ ಪ್ರದೇಶಕ್ಕನುಗುಣವಾಗಿ ಕನ್ನಡ ಭಾಷೆ ಹೆಸರನ್ನು ಪಡೆದಿದೆ. ಆಷಾಡ ಮಾಸದ ಅಮವಾಸ್ಯೆಯಂದು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದ ಮೂಲೆಮೂಲೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡುವವರು ನೆಲಸಿದ್ದಾರೆ. ಜಗತ್ತಿನ ವಿವಿಧ ಭಾಗದಲ್ಲಿ ನೆಲೆಸಿರುವಂತಹ ಜನರು ಭಾಷೆಯ ಮೇಲಿನ ಅಭಿಮಾನದಿಂದ ಈ ದಿನವನ್ನು ಆಚರಿಸುತ್ತಾರೆ.
ಭಾಷೆಗೊಂದು ತನ್ನದೇ ಅಸ್ತಿತ್ವ ಕೊಡಬೇಕು ಮತ್ತು ಈ ಭಾಷೆ ಕೇವಲ ಹಾಸ್ಯಕ್ಕಾಗಿ ಸೀಮಿತವಾಗಿರಬಾರದು ಎಂಬ ನಿಟ್ಟಿನಲ್ಲಿ ಹಾಗೂ ಕುಂದಾಪುರದ ಜನರ ಬದುಕಿನ ಭಾಷೆಯಾಗಿರುವುದರಿಂದ ಈ ದಿನವನ್ನು ಆಚರಿಸಲಾಗುತ್ತದೆ. ಕುಂದವರ್ಮನೆಂಬ ಅರಸನು ಈ ಪ್ರಾಂತ್ಯವನ್ನು ಆಳಿದ ಕಾರಣದಿಂದ ಈ ಪ್ರಾಂತ್ಯದ ಹೆಸರು ಕುಂದಾಪುರ ಎಂದು ಹೇಳಲಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಕುಂದೇಶ್ವರ ದೇವಸ್ಥಾನದಿಂದಲು ಸಹ ಕುಂದಾಪುರ ಹೆಸರು ಬಂತೆಂಬ ಪ್ರತೀತಿ ಇದೆ.

ಕುಂದಾಪುರದಲ್ಲಿ ಆಸಾಡಿ ಅಮಾಸಿಯನ್ನು ಬಹಳ ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಟೋಟ ಸ್ಪರ್ಧೆ, ಕೆಸರುಗದ್ದೆ ಓಟ, ಜಾನಪದ ಶೈಲಿಯ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ವಿನೋದಾವಳಿಗಳನ್ನು ನಡೆಸುತ್ತಾರೆ. ಕುಂದಾಪ್ರ ಕನ್ನಡ ದಿನಕ್ಕಾಗಿ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ. ಕುಂದಾಪುರದಲ್ಲಿ ಮಾತ್ರವಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಾಗೂ ವಿವಿಧೆಡೆ ಕುಂದ ಕನ್ನಡಿಗರು ಈ ದಿನವನ್ನು ಆಷಾಡ ಅಮವಾಸ್ಯೆಯಂದು ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ.

ಆಚೆಗೆ ಹೋದರೆ ಕಡಲು, ಈಚೆಗೆ ಬಂದ್ರೆ ಕಾಡು. ನಡುನಡುವೆ ನದಿ, ತೊರೆ, ಸೇತುವೆ ಹಾಗೂ ಕಾಲುಸಂಕ, ಕೊಂಕಣಿ, ಕೊರಗ, ಬ್ಯಾರಿ, ತುಳುಭಾಷೆ ಮೂಲಕ ಕನ್ನಡ ನಾಡಿನ ಸೊಬಗನ್ನು ಮತ್ತು ವೈವಿಧ್ಯತೆಯನ್ನು ಹೆಚ್ಚಿಸುವಲ್ಲಿ ಕುಂದಾಪ್ರ ಕನ್ನಡ ವಿಶೇಷ ಸ್ಥಾನ ಪಡೆದಿದೆ. ಈ ಭಾಷೆ ಎಲ್ಲರ ಹೆಮ್ಮೆ. ಗಣ್ಯರು ಕೂಡ ತಟಸ್ಥ ಸ್ಥಳದಲ್ಲಿಯೂ ಕುಂದಾಪ್ರ ಕನ್ನಡಲ್ಲೇ ವ್ಯವಹರಿಸುವುದನ್ನು ನೋಡಿದ್ದೇವೆ. ಇಂತಹ ಶ್ರೀಮಂತ ಗ್ರಾಮೀಣ ಸಂಸ್ಕೃತಿಯ ಪ್ರತಿರೂಪವೇ ವಿಶ್ವ ಕುಂದಾಪ್ರ ಕನ್ನಡ ದಿನ.

ಇತ್ತಿಚೆಗೆ ಕುಂದಾಪುರ ಕನ್ನಡದ ಪರಂಪರೆಗೆ ಭೂತರಾಧನೆಯ ಬಗ್ಗೆ ಜಗತ್ತಿಗೆ ಬೆಳಕು ಚೆಲ್ಲಿದ ಕಾಂತಾರ ಸಿನೆಮಾವು ಎಲ್ಲರನ್ನೂ ಆಕರ್ಷಿದೆ. ಸಾಂಸ್ಕೃತಿಕ ಕಲೆ, ಭೂತರಾಧನೆ, ದೈವರಾಧನೆ ಪರಂಪರಾಗತವಾಗಿ ಇಲ್ಲಿನ ಜನರಿಗೆ ಮೈಗೂಡಿಸಿಕೊಂಡು ಬಂದಿದೆ. ಯಕ್ಷಗಾನ, ಪಾಣಾರಾಟ, ಹೌದಾರಾಯನ ಮಲ್ಲ, ಭಜನೆ ಕುಣಿತ ಇಂದಿಗೂ ತನ್ನ ವರ್ಚಸನ್ನು ಕಳೆದುಕೊಂಡಿಲ್ಲ. ಒಟ್ಟಿನಲ್ಲಿ ಸರ್ವಧರ್ಮದ ಸಮನ್ವಯತೆಗೆ ಮೆರಗು ನೀಡಿದೆ ಕುಂದಾಪ್ರ ಕನ್ನಡ.
ಕುಂಭಾಶಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಕೋಟ ಹಲವು ಮಕ್ಕಳ ತಾಯಿ ಅಮೃತೇಶ್ವರಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಬಾರ್ಕೂರು ಕಾಳಿಕಾಂಬ ದೇವಸ್ಥಾನ, ಆನೆಗುಡ್ಡೆ ಮಹಾಗಣಪತಿ ದೇವಸ್ಥಾನ, ಕುಂದಾಪುರ ಕುಂದೇಶ್ವರ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ, ಕಾಳವರ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಕಿರಿಮಂಜೇಶ್ವರ ಅಗಸ್ತೇಶ್ವರ ದೇವಾಲಯ ಹೀಗೆ ಹಲವಾರು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು ಕುಂದಾಪುರದಲ್ಲಿವೆ.
ಕುಂದಾಪುರದ ಗಣ್ಯರು
ಕೋಟ ಶಿವರಾಮ ಕಾರಂತ, ಮೊಗೇರಿ ಗೋಪಾಲಕೃಷ್ಣ ಅಡಿಗ, ವೈದೇಹಿ, ಎ. ಎಸ್. ಎನ್. ಹೆಬ್ಬಾರ್, ನೀಲಾವರ ಸುರೇಂದ್ರ ಅಡಿಗ, ಮನು ಹಂದಾಡಿ, ರಾಜಕೀಯ ಕ್ಷೇತ್ರದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗಂಟಿಹೊಳೆ ಗುರುರಾಜ ಶೆಟ್ಟಿ, ಕಿರಣ್ ಕೊಡ್ಗಿ, ಸುಕುಮಾರ ಶೆಟ್ಟಿ ಬೈಂದೂರು, ಗೋಪಾಲ ಪೂಜಾರಿ, ಚಲನಚಿತ್ರ ಕ್ಷೇತ್ರದಲ್ಲಿ ಉಪೇಂದ್ರ, ರಿಷಬ್ ಶೆಟ್ಟಿ., ರವಿ ಬಸ್ರೂರು, ದೀಪಿಕಾ ಪಡುಕೋಣೆ, ಶೈನ್ ಶೆಟ್ಟಿ, ನಾಗರಾಜ ಪಾಣಾರ, ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್, ಶ್ಲಾಘ ಆಚಾರ್ಯ, ಕಾಶಿನಾಥ, ಕೋಕಿಲಾ ಮೋಹನ, ಭೂಮಿ ಶೆಟ್ಟಿ, ಪ್ರಮೋದ್ ಮರವಂತೆ, ಅರ್ಚನಾ ಉಡುಪ, ಗುಂಡ್ಮಿ ಕಾಳಿಂಗ ನಾವುಡ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಸ್ಯಾಕ್ಸೋಫೋನ್ ವಾದಕಿ ಮೇಘನಾ ಸಾಲಿಗ್ರಾಮ, ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ, ರಥಶಿಲ್ಪಿ ರಾಜ್ ಗೋಪಾಲ ಆಚಾರ್ಯ, ಹನಿಗವಿ ಡುಂಡಿರಾಜ್, ಕ್ರೀಡಾಪಟುಗಳಾದ ಪ್ರಕಾಶ್ ಪಡುಕೋಣೆ, ರಿಷಾಂಕ್ ದೇವಾಡಿಗ, ವಿಶ್ವನಾಥ್ ಗಾಣಿಗ, ತೆಂಗಿನ ಗರಿಯಲ್ಲಿ ಭಾವಚಿತ್ರ ರಚಿಸಿ ವಿಶ್ವದಾಖಲೆ ಬರೆದ ನಾಗೇಶ್ ಆಚಾರ್ಯ ಕೋಟಾ, ಮೊದಲಾದವರು…. ಹುಡುಕುತ್ತಾ ಹೋದರೆ ಇನ್ನಷ್ಟು ಗಣ್ಯಾತಿಗಣ್ಯರ ಸಾಲು ಸಾಲು ಪಟ್ಟಿಗಳಿವೆ.
ಜ್ಯೋತಿ ರಮೇಶ್







































