ಉಡುಪಿ : ಕಾರ್ಮಿಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಜು. 17ರಂದು ಸಂಜೆ ಕಟಪಾಡಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನುಕಟಪಾಡಿ-ಶಿರ್ವ ರಸ್ತೆಯ ಬಳಿಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದ ಓರಿಸ್ಸಾ ಮೂಲದ ಗಣೇಶ್ (50) ಎಂದು ಗುರುತಿಸಲಾಗಿದೆ. ಹತ್ಯೆಗೆ ಕಾರಣನಾದ ಕಾರ್ಮಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಕೆಲಸದ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಇಬ್ಬರೂ ಹೊಡೆದಾಟ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಗಣೇಶ್ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಮತ್ತು ಸಹಕಾರ್ಮಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ, ಕಾಪು ಠಾಣಾ ಉಪ ನಿರೀಕ್ಷಕ ಶ್ರೀಶೈಲ ಮುರಗೋಡ ಸೇರಿದಂತೆ ಕಾಪು ಪೊಲೀಸರು ಭೇಟಿ ನೀಡಿದ್ದಾರೆ






































