ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ದಾಟಿತು. ಮೊದಲ ವಿಧಾನಸಭಾ ಅಧಿವೇಶನ ಕೂಡ ಮುಕ್ತಾಯದ ಹಂತದಲ್ಲಿದೆ. ಆದರೆ, ವಿರೋಧ ಪಕ್ಷವಾದ ಬಿಜೆಪಿಗೆ ಇನ್ನೂ ಸದನದ ನಾಯಕನ ಆಯ್ಕೆ ಮಾಡಲು ಸಾಧ್ಯವೇ ಆಗಿಲ್ಲ ಅನ್ನುವುದು ಬಹಳ ದೊಡ್ಡ ಹಿನ್ನಡೆ. ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಅವಧಿ (ಮೂರು ವರ್ಷ) ಮುಗಿದು ಮುಂದಿನ ಆಗಸ್ಟ್ 20ಕ್ಕೆ ಒಂದು ವರ್ಷ ಪೂರ್ಣವಾದರೂ ನಳಿನ್ ಕುಮಾರ್ ಕಟೀಲು ಅವರೇ ಮುಂದುವರೆಯುತ್ತಿದ್ದಾರೆ. ಯಾವಾಗಲೂ ಖಡಕ್ ನಿರ್ಧಾರಕ್ಕೆ ಹೆಸರಾಗಿದ್ದ ಬಿಜೆಪಿ ಹೈಕಮಾಂಡ್ ಇನ್ನೂ ಈ ವಿಷಯದಲ್ಲಿ ‘ವೈಟ್ ಆಂಡ್ ವಾಚ್ ‘ ನೀತಿ ಅನುಸರಿಸುತ್ತಿದೆ.
ಊಹಿಸದ ಫಲಿತಾಂಶ
ಬಿಜೆಪಿ ಕನಸಿನಲ್ಲಿಯೂ ಊಹೆ ಮಾಡದ ಫಲಿತಾಂಶ ವಿಧಾನಸಭಾ ಚುನಾವಣೆಯಲ್ಲಿ ಬಂದಿದೆ. ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಚುನಾವಣಾ ಪೂರ್ವದಲ್ಲಿ ಒಂದು ತಿಂಗಳ ಅವಧಿಯಲ್ಲಿ ಚುನಾವಣಾ ಚಾಣಕ್ಯ ಅಮಿತ್ ಶಾ ಕರ್ನಾಟಕದಲ್ಲಿ ಬಂದು ಬೀಡು ಬಿಟ್ಟಿದ್ದರೂ, ಪ್ರಧಾನಿ ಮೋದಿ ಅತೀ ಹೆಚ್ಚು ರಾಲಿ, ರೋಡ್ ಶೋ ನಡೆಸಿದ್ದರೂ ಹೇಳಿಕೊಳ್ಳುವಂತಹ ಪ್ರಯೋಜನ ಬಿಜೆಪಿಗೆ ಆಗಿಲ್ಲ. ನಡ್ಡಾ ಆದಿಯಾಗಿ ರಾಷ್ಟ್ರಮಟ್ಟದ ಅನೇಕ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕರ್ನಾಟಕ ಸುತ್ತಿದ್ದರು. ಆದರೆ ಬಿಜೆಪಿ ಇಷ್ಟೊಂದು ಹೀನಾಯವಾಗಿ ಸೋತದ್ದು ಬಿಜೆಪಿ ಸರಕಾರಕ್ಕೆ ಮಾತ್ರ ಆದ ಸೋಲು ಅಲ್ಲ. ಬಿಜೆಪಿ ಹೈಕಮಾಂಡ್ ಇಮೇಜ್ ಕೂಡ ಭಾರೀ ಕುಸಿಯುವಂತಾಗಿದೆ. ಇನ್ನೊಂದು ವರ್ಷದ ಒಳಗೆ ಲೋಕ ಸಭಾ ಚುನಾವಣೆ ಇಟ್ಟುಕೊಂಡು ಹೈಕಮಾಂಡ್ ಕರ್ನಾಟಕದಲ್ಲಿ ಮತ್ತೆ ಎಡವಟ್ಟು ಮಾಡಿಕೊಳ್ಳಲು ಸಿದ್ದವಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಮಾಡಿದ ಹೊಸ ಪ್ರಯೋಗಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ರಾಜ್ಯದ ನಾಯಕರ ಇಚ್ಛೆಗೆ ವಿರುದ್ಧವಾಗಿ ಟಿಕೆಟ್ ಪಡೆದ ಹೊಸ ಮುಖಗಳು ಸೋಲು ಕಂಡದ್ದೇ ಹೆಚ್ಚು. ಇದು ಪಕ್ಷದ ಹೈಕಮಾಂಡಿಗೆ ಇನ್ನೂ ಅರಗಿಸಿಕೊಳ್ಳಲು ಆಗ್ತಾ ಇಲ್ಲ.
ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ರಾಜ್ಯ ಸರಕಾರವು ಒಳ ಮೀಸಲಾತಿಗೆ ಕೈ ಹಾಕಲು ಹೋಗಿ ಜೇನುಗೂಡಿಗೆ ಕಲ್ಲು ಬಿಸಾಡಿದ ಹಾಗೆ ಏಟು ತಿಂದಿದೆ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಿಜೆಪಿಯ ಜೊತೆಗೆ ದೀರ್ಘ ಅವಧಿಗೆ ನಿಂತಿದ್ದ ಲಿಂಗಾಯತರು ಇಂದು ಭ್ರಮ ನಿರಸನಗೊಂಡಿದ್ದಾರೆ. ಲಿಂಗಾಯತ ಸಮುದಾಯ ನಿಧಾನವಾಗಿ ಬಿಜೆಪಿ ಪಕ್ಷದಿಂದ ದೂರ ಸರಿಯುವ ಸಂಕೇತಗಳು ಕಂಡು ಬಂದವು.

ಇನ್ನು ಅಷ್ಟೇ ಬಲಿಷ್ಟವಾದ ಇನ್ನೊಂದು ಸಮುದಾಯ ಎಂದರೆ ಒಕ್ಕಲಿಗ. ಒಕ್ಕಲಿಗರು ತಮ್ಮ ನಿಷ್ಠೆಯನ್ನು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಕಡೆಗೆ ಬದಲಾಯಿಸಿರುವುದು ಮೊನ್ನೆಯ ಫಲಿತಾಂಶದಲ್ಲಿ ಗೋಚರಿಸಿದೆ. ಈ ಎರಡು ಸಮುದಾಯಗಳ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಈಗ ಇನ್ನಿಲ್ಲದ ಯೋಜನೆ ರೂಪಿಸುತ್ತಿದೆ. ಇನ್ನು ಅಲ್ಪಸಂಖ್ಯಾತರ 4 ಶೇಕಡಾ ಮೀಸಲಾತಿ ಬಿಜೆಪಿ ಸರಕಾರ ಕಿತ್ತುಹಾಕಿದ ನಂತರ ಮುಸ್ಲಿಂ ಸಮುದಾಯ ಹಿಂದೆಂದೂ ಇಲ್ಲದಷ್ಟು ಬಿಜೆಪಿಯ ಮೇಲೆ ಮುನಿಸಿಕೊಂಡಿದೆ.
ಇಂತಹ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಹೈಕಮಾಂಡ್ ದುಡುಕು ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹಾಗೆಂದು ಬಿಜೆಪಿಯಲ್ಲಿ ಸಮರ್ಥ ನಾಯಕರ ಕೊರತೆ ಇಲ್ಲವೆಂದಲ್ಲ. ಎಲ್ಲರೂ ಬೂದಿ ಮುಚ್ಚಿದ ಕೆಂಡದ ಹಾಗೆ ಆಗಿದ್ದಾರೆ. ಯತ್ನಾಳ್, ಅಶೋಕ್, ವಿಜಯೇಂದ್ರ, ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ, ಬಸವರಾಜ್ ಬೊಮ್ಮಾಯಿ ಇವರೆಲ್ಲರೂ ಯಾವ ಹುದ್ದೆಗೂ ನ್ಯಾಯ ಒದಗಿಸುವ ಸಾಮರ್ಥ್ಯ ಹೊಂದಿದವರು. ಸಿ.ಟಿ. ರವಿ ಚುನಾವಣೆಯಲ್ಲಿ ಸೋತರೂ ಘರ್ಜನೆ ಮಾಡುತ್ತಲೇ ಇದ್ದಾರೆ.
ಇದನ್ನೆಲ್ಲ ಗಮನಿಸುತ್ತಾ ಬಿಜೆಪಿ ಹೈಕಮಾಂಡ್ ಸೂಕ್ತವಾದ ನಿರ್ಧಾರಕ್ಕೆ ಬರಲು ಆಗದೆ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ರಾಜ್ಯ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುವ ರಾಜ್ಯಾಧ್ಯಕ್ಷ ಹುದ್ದೆಯು ಸದ್ಯಕ್ಕೆ ಹೈಕಮಾಂಡ್ ತುರ್ತು. ಏನಿದ್ದರೂ ವಿಪಕ್ಷ ನಾಯಕನ ಹುದ್ದೆಯ ಆಯ್ಕೆ ಇನ್ನಷ್ಟು ಮುಂದೆ ಹಾಕಿದರೆ ಬಿಜೆಪಿ ಇಮೇಜ್ ಮಸುಕಾಗುವುದಂತು ಖಂಡಿತ.






































