ಬೀಳಿಸದಿರೆಲೊ ನಿನ್ನ ನೆರಳನಿತರ ಮೇಲೆ|
ಬಾಳಿಕೊಳುವರು ತಂತಮ್ಮ ಬೆಳಕಿನಲಿ||
ಮೇಲುಬೀಳುಗಳಾರ್ಗದೆಂತೊ ನೀನೇರಿವೆ|
ತಾಳದಿರು ಗುರುತನವ-ಮಂಕುತಿಮ್ಮ”
ನಿನ್ನ ನೆರಳಿನ ಛಾಯೆಯನ್ನು ಇತರರ ಮೇಲೆ ಬೀಳಿಸಬೇಡ. ಅವರು ತಮ್ಮ ಬೆಳಕಿನಲ್ಲಿ ಬಾಳಿಕೊಳ್ಳಲಿ. ಯಾರಿಗೆ ಯಾವುದು ಮೇಲು ಅಥವಾ ಕೀಳು ಎನ್ನುವುದನ್ನು ನೀನು ಸರಿಯಾಗಿ ತಿಳಿದಿರುವೆಯಾ? ಯಾವುದೂ ಸರಿಯಾಗಿ ತಿಳಿಯದಿದ್ದರೂ ಎಲ್ಲವೂ ಗೊತ್ತಿದೆ ಎಂದು ಉಪದೇಶ ಮಾಡುವ ಗುರುವಿನ ಅವತಾರವನ್ನು ತಾಳಿ ಹೆಮ್ಮೆಯಿಂದ ಬೀಗಬೇಡ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಜೀವನದಲ್ಲಿ ಪ್ರಚಾರ ಮತ್ತು ಪ್ರಸಿದ್ಧಿಗಾಗಿ ತನಗೆ ಎಲ್ಲವೂ ಗೊತ್ತು ಎಂದು ಭಾವಿಸಿಕೊಂಡು ಸಿಕ್ಕಿದವರಿಗೆಲ್ಲಾ ಉಚಿತವಾಗಿ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಗುರುಗಳಾಗಿ ಪುಕ್ಕಟೆ ನೀತಿ ಪಾಠವನ್ನು ಹೇಳುತ್ತಾರೆ. ನನ್ನ ಮಾತುಗಳನ್ನು ಕೇಳಿದರೆ ಹಾಗೂ ಅದರಂತೆ ನಡೆದರೆ ಮಾತ್ರ ಒಳ್ಳೆಯದಾಗುತ್ತೆ ಇಲ್ಲದಿದ್ದರೆ ಖಂಡಿತ ಕೆಟ್ಟದಾಗುತ್ತೆ ಅಂತ ಎಚ್ಚರಿಸುತ್ತಾರೆ. ಆದರೆ ಡಿವಿಜಿಯವರು ಹೇಳುವಂತೆ ಇಂತಹ ಉಚಿತ ಸಲಹೆ ಮತ್ತು ಮಾರ್ಗದರ್ಶನದ ಅಗತ್ಯ ಯಾರಿಗೂ ಇಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ತಿಳಿವಳಿಕೆ, ಬುದ್ಧಿಮತ್ತೆ ಹಾಗು ಕಾರ್ಯಕ್ಷಮತೆ ಇರುತ್ತೆ. ಅವರು ತಮ್ಮ ಅರಿವಿನ ಬೆಳಕಿನಲ್ಲಿ ನಡೆದು ಬದುಕಿನಲ್ಲಿ ಯಶಸ್ಸು ಪಡೆಯುತ್ತಾರೆ.
ಅಹಂಕಾರ ಮತ್ತು ಅಧಿಕಾರದ ಮದದಿಂದ ತಮ್ಮ ಪ್ರಭಾವವನ್ನು ಇತರರ ಮೇಲೆ ಬೀರುವ ಪ್ರಯತ್ನ ಮಾಡಬಾರದು. ಅವರವರ ಸ್ವಂತದ ತಿಳಿವಳಿಕೆಯಿಂದ ಅರಳಲು ಬಿಡಬೇಕು. ಕೆಲವರಿಗೆ ಯಾರಿಗಾದರೂ ಏನನ್ನಾದರೂ ಹೇಳುತ್ತಾ ಇರಬೇಕು. ಅನ್ಯರನ್ನು ತಿದ್ದುವುದೇ ಅವರಿಗೆ ಒಂದು ಚಟವಾಗಿರುತ್ತದೆ. ಅದಕ್ಕೆ ಡಿವಿಜಿ ಹೇಳಿದ್ದು ತಾಳದಿರು ಗುರುತನವ.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ಮನವ ಸಂತೈಸಿಕೊಳ್ಳಿ.
ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ

ಎಂಬ ಬಸವಣ್ಣನವರ ನುಡಿಯಂತೆ ಡಿವಿಜಿಯವರು ತಾಳದಿರು ಗುರುತನವ ಎಂದಿದ್ದಾರೆ. ‘ನಿನಗೆ ನೀನೆ ಬೆಳಕಾಗುʼ ಎಂಬ ಗೌತಮ ಬುದ್ಧನ ನುಡಿಯರಿತು ಇತರರ ಮೇಲೆ ಪ್ರಭಾವ ಬೀರುವ ಬದಲು ನಮಗೆ ನಾವೆ ಗುರುವಾಗಿ ನಮ್ಮನ್ನು ನಾವು ತಿದ್ದಿಕೊಂಡು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ ಕಾರ್ಕಳ ತಾಲೂಕು









































