ಕಾರಂತರನ್ನು ನೆನಪಿಸುವ ಬರವಣಿಗೆಗಳ ಸರದಾರ : ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ : ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ವತಿಯಿಂದ ಕರ್ನಾಟಕ ಕಂಡ ಅಪ್ರತಿಮ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರ ಅಭಿನಂದನಾ ಸಮಾರಂಭವು ಜು. 8ರಂದು ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.
70ರ ಸಂದರ್ಭದಲ್ಲಿ ಶಾಂತಿಯಂತಹ ಹೋಮ ಹವನಾದಿಗಳನ್ನು ಮಾಡಿ ಭಗವಂತನಿಗೆ ಅರ್ಪಿಸಲಾಗುತ್ತದೆ. ಅಕ್ಷರ ಸಂತ ಪ. ರಾಮಕೃಷ್ಣ ಶಾಸ್ತ್ರಿ ಅವರ 70ನೆಯ ಜನುಮ ವಸಂತವನ್ನು ಸಾಹಿತ್ಯ ಜಾತ್ರೆಯಾಗಿ ಆಚರಿಸಿದ್ದು ಸಾಹಿತಿಗೆ ನಿಜವಾಗಿ ಸಲ್ಲುವ ಗೌರವದ ಅಭಿನಂದನೆಯಾಗಿದೆ. ಅಭಿನಂದನೆಯ ಕಾರ್ಯಕ್ರಮ ಸಾಹಿತ್ಯದ ಸಮ್ಮೇಳನದಂತೆ ಕಂಡು ಬಂತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ. ರಾಮಕೃಷ್ಣ ಶಾಸ್ತ್ರಿ ಬರಹಗಳ ಶಕ್ತಿಯಾಗಿದ್ದಾರೆ. ಅವರಲ್ಲಿ ಶಿವರಾಮ ಕಾರಂತರಂತೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ನುಡಿ ಶಂಸನೆ ಗೈದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಪಂಡಿತ್ ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಬದುಕು ರೂಪಿಸುವಂಥದ್ದು. ಪಠ್ಯ-ಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಮಂದಿ ಹುಟ್ಟಿ ಬರಲಿ ಎಂದರು.

ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ. ರಾಮಕೃಷ್ಣ ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕಾರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ಧಿಸಿದೆ ಎಂದರು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಎನ್. ಅಶೋಕ್ ಭಟ್ ಉಜಿರೆ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶಾರದಾ ಆರ್. ಶಾಸ್ತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐದು ಪುಸ್ತಕಗಳ ಬಿಡುಗಡೆ
ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಿಗಗಳು, ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಸಂಚಾಲಕ ಸಂಪತ್ ಬಿ. ಸುವರ್ಣ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ಸಮ್ಮಾನ ಪತ್ರ ವಾಚಿಸಿದರು. ನ್ಯಾಯವಾದಿ ಧನಂಜಯ್ ರಾವ್ ನಿರೂಪಿಸಿದರು.








































