200 ಕೋ.ರೂ. ಬೇನಾಮಿ ಸೊತ್ತಿನ ಒಡೆಯ ಅಜಿತ್‌ ಕುಮಾರ್‌

ತಹಶೀಲ್ದಾರ್‌ ಸಂಪತ್ತು ನೋಡಿ ಬೆಚ್ಚಿ ಬಿದ್ದ ಲೋಕಾಯುಕ್ತ ಅಧಿಕಾರಿಗಳು

ಬೆಂಗಳೂರು : ಲೋಕಾಯುಕ್ತ ದಾಳಿಯ ಬಳಿಕ ಬಂಧನಕ್ಕೊಳಗಾಗಿರುವ ಕೆ.ಆರ್‌.ಪುರಂ ತಹಶೀಲ್ದಾರ್‌ ಪುತ್ತೂರು ಮೂಲದ ಅಜಿತ್‌ ಕುಮಾರ್‌ ರೈ ಕೇವಲ ಹತ್ತು ವರ್ಷದಲ್ಲಿ ಮಾಡಿರುವ ಸಂಪತ್ತನ್ನು ನೋಡಿ ಅಧಿಕಾರಗಳೇ ದಂಗುಬಡಿದು ಹೋಗಿದ್ದಾರೆ. ವಿಲಾಸಿ ಜೀವನ ನಡೆಸುತ್ತಿದ್ದ ಅಜಿತ್‌ ಸುಮಾರು 200 ಕೋ.ರೂ. ಬೇನಾಮಿ ಸಂಪತ್ತಿನ ಒಡೆಯ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈತ ಬ್ಯಾಂಕಾಕ್‌ ಸೇರಿ ಹಲವು ದೇಶಗಳಿಗೆ ಪ್ರವಾಸಕ್ಕೆ ಹೋಗಿ ಬಂದಿರುವುದು ತನಿಖೆಯಿಂದ ಬಯಲಿಗೆ ಬಂದಿದೆ.
ಸಹಕಾರ ನಗರದಲ್ಲಿರುವ ಅವನ ಬಂಗಲೆಯಲ್ಲಿ ದುಬಾರಿ ಬೆಲೆಯ ಸುಮಾರು 50 ಕೈ ಗಡಿಯಾರಗಳು ಪತ್ತೆಯಾಗಿವೆ. ಆತನ ಬಳಿಯಿರುವ ಐಷಾರಾಮಿ ವಾಹನಗಳು, ಕೈ ಗಡಿಯಾರ, ಸುಮಾರು 18 ಲೀಟರ್‌ ವಿದೇಶಿ ಮದ್ಯದ ಬಾಟಲ್‌ಗಳು ಸಿಕ್ಕಿವೆ. ಅಜಿತ್‌ಗೆ ಸೇರಿದ ಸಹಕಾರ ನಗರದ ಮನೆಯಲ್ಲಿ 750 ಗ್ರಾಂ ಚಿನ್ನಾಭರಣ, ದುಬಾರಿ ಬೆಲೆಯ ಮೂರು ರ‍್ಯಾಡೋ ವಾಚ್‌, ವಿದೇಶಿ ಬ್ರಾಂಡ್‌ನ ಸುಮಾರು 50 ವಾಚ್‌ ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ಸುಮಾರು 60 ಲಕ್ಷ ರೂ. ಇದೆ. ಅಜಿತ್‌ ದಿನಕ್ಕೊಂದು ವಾಚ್‌ ಧರಿಸುವ ಅಭ್ಯಾಸ ಹೊಂದಿದ್ದ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಆರೋಪಿ ಅಜಿತ್‌ ಕುಮಾರ್‌ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ಹಲವು ದಿನಗಳ ಕಾಲ ಬ್ಯಾಂಕಾಕ್‌ ಪ್ರವಾಸ ಮಾಡಿ ಬಂದಿರುವುದು ಖಚಿತ ಪಟ್ಟಿದೆ. ಯಾವ್ಯಾವ ದೇಶಗಳಿಗೆ ತೆರಳಿದ್ದ? ಎಷ್ಟು ಹಣ ಖರ್ಚು ಮಾಡಿದ್ದ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಅಜಿತ್‌ ಬಳಿ ಲ್ಯಾಂಡ್‌ ಕ್ರೂಸರ್‌, ವೊಲ್ವೋ 360, ಥಾರ್‌ ಜೀಪ್‌, ಫಾರ್ಚೂನರ್‌ ಸೇರಿ 9 ಕಾರುಗಳಿವೆ. ಜತೆಗೆ ಮೂರು ರಾಯಲ್‌ ಎನ್‌ಫೀಲ್ಡ್‌, ಸ್ಕೂಟಿ ಪತ್ತೆಯಾಗಿವೆ. ಈ ಎಲ್ಲ ವಾಹನಗಳ ಕೊನೆಯ ನಂಬರ್‌ಗಳು 1368 ಆಗಿದೆ. ವಾಹನಗಳನ್ನು ಆರೋಪಿಯ ಆಸ್ತಿಯಲ್ಲಿ ಜಮಾವಣೆ ಮಾಡಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ತಂದೆಯ ಮರಣದ ಬಳಿಕ ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎಫ್‌ಡಿಎ ಹುದ್ದೆ ಪಡೆದುಕೊಂಡಿದ್ದ ಅಜಿತ್‌ ಹಂತ ಹಂತವಾಗಿ ತಹಸೀಲ್ದಾರ್‌ ಹುದ್ದೆಗೇರಿದ್ದ. ವೃತ್ತಿ ಜೀವನದ ಬಹುತೇಕ ಅವಧಿಯನ್ನು ದೊಡ್ಡಬಳ್ಳಾಪುರ, ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಕಳೆದಿದ್ದಾನೆ. ಅದೇ ಭಾಗದಲ್ಲಿಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದಾನೆ. ಈವರೆಗೆ 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ. ದಾಟಬಹುದು. ಬಹುತೇಕ ಆಸ್ತಿ ಅಜಿತ್‌ ಆಪ್ತ ಗೌರವ್‌ ಶೆಟ್ಟಿ ಹೆಸರಿನಲ್ಲಿದೆ ಎಂದು ಮೂಲಗಳು ಹೇಳಿವೆ.





























































































































error: Content is protected !!
Scroll to Top