ಪಕ್ಷದ ಕಚೇರಿಯಲ್ಲಿ ಅಧಿಕಾರಿಗಳ ಸಭೆ : ಶಾಸಕರಿಂದ ಶಿಷ್ಟಾಚಾರದ ಉಲ್ಲಂಘನೆ – ಶುಭದ ರಾವ್

ಕಾರ್ಕಳ : ಶಾಸಕ ಸುನಿಲ್‌ ಕುಮಾರ್ ತಮ್ಮ ಪಕ್ಷದ ಚಟುವಟಿಕೆಗಳು ನಡೆಯುವ ಕಚೇರಿಯಲ್ಲಿ ಸರಕಾರಿ ಅಧಿಕಾರಿಗಳ ಸಭೆಗಳನ್ನು ನಡೆಸುತ್ತಿದ್ದು, ಇದು ಕಾನೂನು ಬಾಹಿರ ಹಾಗೂ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ಶಾಸಕರು ಮತ್ತು ಸಭೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ತಕ್ಷಣವೆ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಶುಭದ ರಾವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಪಕ್ಷಕ್ಕೆ ಸೀಮಿತವಲ್ಲ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸರಕಾರವೇ ಶಾಸಕರಿಗಾಗಿ ಕಚೇರಿಯನ್ನು ಒದಗಿಸುತ್ತದೆ. ಅಂತೆಯೇ, ಕಾರ್ಕಳದಲ್ಲಿ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಶಾಸಕರ ಕಚೇರಿಯಿದ್ದು, ಅಧಿಕಾರಿಗಳ ಸಭೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಸೇರಿದಂತೆ ಸರಕಾರಿ ಕಾರ್ಯಕ್ರಮಗಳು ಅಲ್ಲಿಯೇ ನಡೆಯಬೇಕು ವಿನ: ಪಕ್ಷದ ಕಚೇರಿಯಲ್ಲಿ ಅಲ್ಲ. ಆದರೆ, ಶಾಸಕ ಸುನಿಲ್ ಕುಮಾರ್ ಇದಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಮತ್ತು ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ವಿತರಣೆ ಮಾಡುತ್ತಾರೆ. ಯಾವುದೇ ಫಲಾನುಭವಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ, ಆದ್ದರಿಂದ ಇಲ್ಲಿ ಫಲಾನುಭವಿಗಳನ್ನು ಒಂದು ಪಕ್ಷದ ಕಚೇರಿಗೆ ಬರಲು ಒತ್ತಡ ಹೇರಿದಂತಾಗುತ್ತದೆ. ಇದು ಕಾನೂನು ಬಾಹಿರ ಹಾಗೂ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗುವುದು ಮತ್ತು ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಶುಭದ ತಿಳಿಸಿದ್ದಾರೆ.

ನ್ಯಾಯದಲ್ಲಿ ವ್ಯತ್ಯಾಸವಿದೆಯೇ..?
ಕಾಂಗ್ರೆಸ್‌ ಮುಖಂಡ ಸಾರ್ವಜನಿಕರ ಮನವಿಗೆ ಸ್ಪಂದಿಸಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದನ್ನು ದೊಡ್ಡ ಅಪರಾಧ ಎಂಬಂತೆ ವೈದ್ಯಾಧಿಕಾರಿಗಳಿಗೆ ಮತ್ತು ಸಿಬಂದ್ದಿಗೆ ನೋಟೀಸು ಜಾರಿ ಮಾಡಿಸಿದ್ದೀರಿ. ಇದರಿಂದಾಗಿ ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ವೈದ್ಯರಿಗೆ ನೋಟೀಸು ನೀಡುವಲ್ಲಿ ವಹಿಸಿದ ಆಸಕ್ತಿ ವೈದ್ಯರ ಮತ್ತು ಸಿಬಂದ್ದಿ ವರ್ಗದ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ತೋರಿಸುತ್ತಿದ್ದರೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿತ್ತು. ಅದು ನಿಮ್ಮಿಂದ ಯಾಕೆ ಸಾದ್ಯವಾಗಲಿಲ್ಲ ? ಅಧಿಕಾರವಿದೆ ಎನ್ನುವ ಮಾತ್ರಕ್ಕೆ ನ್ಯಾಯದಲ್ಲಿ ವ್ಯತ್ಯಾಸವಿದೆಯೇ? ಇಲ್ಲಿ ತಮಗೊಂದು ಕಾನೂನು ವೈದ್ಯರಿಗೊಂದು ಕಾನೂನೇ ? ಎಂದು ಶುಭದ ಶಾಸಕರನ್ನು ಪ್ರಶ್ನಿಸಿದ್ದಾರೆ.











































































error: Content is protected !!
Scroll to Top