ಸಹ ಪ್ರಯಾಣಿಕರಿಗೆ ಅಚ್ಚರಿಯೋ ಅಚ್ಚರಿ
ಹೊಸದಿಲ್ಲಿ : ದಿಲ್ಲಿಯ ಮೆಟ್ರೊ ಪ್ರಯಾಣಿಕರಿಗೆ ಇಂದು ತಮ್ಮ ಜತೆಗಿದ್ದ ಪ್ರಯಾಣಿಕನನ್ನು ನೋಡಿ ಅಚ್ಚರಿಯ ಮೇಲೆ ಅಚ್ಚರಿ. ಆ ಪ್ರಯಾಣಿಕ ಬೇರಾರೂ ಅಲ್ಲ, ಪ್ರಧಾನಿ ನರೇಂದ್ರ ಮೋದಿ. ದಿಲ್ಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಇಂದು ಬೆಳಗ್ಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು. ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಿ ಮೋದಿ ಕೌಂಟರ್ನಲ್ಲಿ ಟಿಕೆಟ್ ಪಡೆದು ಮೆಟ್ರೊ ಹತ್ತಿದರು. ಪ್ರಧಾನಿಯನ್ನು ಕಂಡು ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದಾರೆ. ಮೋದಿ ಇದೇ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದರು. ಮೆಟ್ರೋದಲ್ಲಿ ಸಾಮಾನ್ಯರಂತೆ ಕುಳಿತು ಪ್ರಧಾನಿ ಮೋದಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ವಿಶ್ವವಿದ್ಯಾಲಯದವರೆಗೆ ಹಳದಿ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸಿದರು, ಎಎಫ್ಸಿ ಗೇಟ್ನಿಂದ ಟೋಕನ್ ಮೂಲಕ ನಿಲ್ದಾಣ ಪ್ರವೇಶಿಸಿದ್ದರು. ಆರಂಭದಲ್ಲಿ ಪ್ರಧಾನಿ ಮೋದಿ ಅವರ ಸುತ್ತ ಯಾರೂ ಇರಲಿಲ್ಲ. ಆದಾಗ್ಯೂ, ಕ್ರಮೇಣ ವಿದ್ಯಾರ್ಥಿಗಳು ಸುತ್ತುವರೆದರು. ಈ ವೇಳೆ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿದರು. ಮೋದಿ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.





































