ಅಸ್ವಸ್ಥ ವಿದ್ಯಾರ್ಥಿನಿ ಉಡುಪಿ ಆಸ್ಪತ್ರೆಯಲ್ಲಿ ಸಾವು

ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರ ಆರೋಪ

ಉಡುಪಿ: ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಹದಿಹರೆಯದ ವಿದ್ಯಾರ್ಥಿನಿಯೊಬ್ಬಳು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ನಿಖಿತಾ(20) ಮೃತ ವಿದ್ಯಾರ್ಥಿನಿ. ಜನಾರ್ದನ-ಶೋಭಾ ದಂಪತಿಯ ಏಕೈಕ ಪುತ್ರಿಯಾಗಿದ್ದ ಈಕೆಯನ್ನು ಹೊಟ್ಟೆನೋವು ಚಿಕಿತ್ಸೆಗೆ ಕಳೆದ ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ಎಂಡೋಸ್ಕೋಪಿ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಸರಿಯಾದ ಮಾಹಿತಿ ನೀಡದೆ ಆಪರೇಷನ್​ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಪೆಂಡಿಕ್ಸ್ ಆಗಿದೆ ಎಂದು ಆಪರೇಷನ್ ಮಾಡಿದ್ದು, ಶಸ್ತ್ರಚಿಕಿತ್ಸೆ ನಡೆದ ಬಳಿಕ ಶ್ವಾಸಕೊಶದಲ್ಲಿ ನೀರು ತುಂಬಿದ ಪರಿಣಾಮ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದನ್ನು ಕಂಡು ಪೋಷಕರು ಆತಂಕಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಇದ್ದಕ್ಕಿದ್ದಂತೆ ಶ್ವಾಸದಲ್ಲಿ ಏರುಪೇರು ಕಂಡುಬಂದು ಭಾನುವಾರ ಮುಂಜಾನೆ ಯುವತಿ ಸಾವನ್ನಪ್ಪಿದ್ದಾಳೆ. ಸಾವಿಗೆ ಹೃದಯಘಾತ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಮಣಿಪಾಲಗೆ ಕೊಂಡೊಯ್ಯಲು ಒಪ್ಪದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳೇ ಇಲ್ಲದ ಮೇಲೆ ದೂರು ನೀಡುವುದು ಯಾಕೆ ಎಂದು ಪೊಲೀಸ್ ದೂರು ನೀಡಲು ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿಖಿತಾ ಸಾವಿಗೆ ನ್ಯಾಯ ಒದಗಿಸಿಕೊಡಲು ಒತ್ತಾಯಿಸಿ ಆಂದೋಲನ ನಡೆಯುತ್ತಿದೆ. ಮಂಗಳೂರಿನ ಕೆಪಿಟಿಯಲ್ಲಿ ನಿಕಿತಾ ಡಿಪ್ಲೊಮಾ ಮಾಡುತ್ತಿದ್ದರು. ಸಾವಿನ ನೋವಿನಲ್ಲಿ ಮರಣೋತ್ತರ ಪರೀಕ್ಷೆಗೂ ಕುಟುಂಬ ಒಪ್ಪಿಲ್ಲ. ಮರಣೋತ್ತರ ಪರೀಕ್ಷೆ ಆಗದೆ ಪೊಲೀಸ್ ದೂರು ಕೂಡ ದಾಖಲಾಗಿಲ್ಲ.





























































































































error: Content is protected !!
Scroll to Top