ಆರೋಗ್ಯಧಾರ : ಯೋಗದ ಕುರಿತಂತೆ ಮಾಹಿತಿ

ಜೂ.21ಕ್ಕೆ ವಿಶ್ವಯೋಗ ದಿನಾಚರಣೆಯನ್ನು ಎಲ್ಲರೂ ಆಚರಿಸಿದೆವು. ಎಲ್ಲರೂ ಅತ್ಯುತ್ಸಾಹದಿಂದ ಯೋಗಾಸನ ಪ್ರಾಣಾಯಾಮಗಳನ್ನು ಮಾಡಿದರು. ಸಾಮಾನ್ಯವಾಗಿ ತಮ್ಮ ದೇಹಬಲವನ್ನು ಹೆಚ್ಚಿಸಲು ಹಾಗೂ ಮಾನಸಿಕ ಶಾಂತತೆಯನ್ನು ಕಾಪಾಡಲು ಯೋಗಾಸನ ಪ್ರಾಣಾಯಾಮ ಧ್ಯಾನದಲ್ಲಿ ತೊಡಗುತ್ತಾರೆ ಇದನ್ನೇ ಯೋಗವೆಂದು ತಿಳಿದುಕೊಂಡಿದ್ದಾರೆ. ಆದರೆ ಯೋಗಾಸನ ಪ್ರಾಣಾಯಾಮಗಳು ಯೋಗದ ಭಾಗವಷ್ಟೇ. ಯೋಗ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ಯೋಗವೆಂದರೆ ಸೇರಿಸುವುದು ಅಥವಾ ಕೂಡಿಸುವುದು. ಆತ್ಮವನ್ನು ಪರಮಾತ್ಮನೊಡನೆ ಸಂಯೋಗಗೊಳಿಸುವುದು. ನಮ್ಮ ಜೀವನದ ಗುರಿ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದು ಇದೇ ಯೋಗವೆನಿಸುತ್ತದೆ.
ಯೋಗಕ್ಕೆ ಹಲವಾರು ವ್ಯಾಖ್ಯೆಗಳು ಇವೆ. “ಸಮತ್ವಂ ಯೋಗಮುಚ್ಯತೆ” ಜೀವನದಲ್ಲಿ ಸುಖ-ದುಃಖ ಸಿಹಿ-ಕಹಿ, ಉಷ್ಣ-ಶೀತ, ಕತ್ತಲೆ-ಬೆಳಕು ಇತ್ಯಾದಿ ದ್ವಂದ್ವಗಳನ್ನು ಸಮನಾಗಿ ಸ್ವೀಕರಿಸುವುದು ಯೋಗವೆನಿಸಿಕೊಳ್ಳುತ್ತದೆ. “ಯೋಗ ಕರ್ಮಸು ಕೌಶಲಂ” ಎಂದರೆ ನಾವು ಯಾವುದೇ ಕೆಲಸವನ್ನು ಮಾಡಬಹುದು. ಆದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ಕೌಶಲ್ಯ ಪೂರ್ಣವಾಗಿ ಮಾಡುವುದು ಯೋಗವೆನಿಸಿಕೊಳ್ಳುತ್ತದೆ.“ಯೋಗಸ್ತು ಚಿತ್ತವೃತ್ತಿ ನಿರೋಧ” ಅಂದರೆ ದ್ವೇಷಗಳನ್ನು ನಿಯಂತ್ರಣ ಗೊಳಿಸುವುದು ಯೋಗ. ಯೋಗಗಳಲ್ಲಿ ಅಷ್ಟ ಅಂಗಗಳು ಇವೆ. ಪ್ರತಿಯೊಂದು ಅಂಗವು ನಮಗೆ ಮುಂದಿನ ಹಂತಕ್ಕೆ ಕರೆದೊಯ್ಯುತ್ತದೆ. ಕೊನೆಯ ಹಂತದಲ್ಲಿ ನಾವು ಪರಮಾತ್ಮನನ್ನು ಸೇರುತ್ತೇವೆ.


ಅಷ್ಟಾಂಗ ಯೋಗಗಳು ಹೀಗಿವೆ-

  1. ಯಾಮಗಳು ಎಂದರೆ ಅಹಿಂಸೆ, ಸತ್ಯ, ಆಸ್ತಿಯ, ಬ್ರಹ್ಮಚರ್ಯ, ಅಪರಿಗ್ರಹ. ಇದು ನಮ್ಮ ನಡುವಳಿಕೆಯನ್ನು ಸೂಚಿಸುತ್ತದೆ. ನಾವು ಇದನ್ನು ಪಾಲಿಸಬೇಕು. ಅಹಿಂಸೆ ಎಂದರೆ ಬೇರೆಯವರಿಗೆ ಹಿಂಸೆ ಮಾಡದೇ ಇರುವುದು. ಸತ್ಯ ಎಂದರೆ ನಮ್ಮ ನಡೆ ನುಡಿಗಳಲ್ಲಿ ಸತ್ಯ ಮಾರ್ಗವನ್ನು ಪಾಲಿಸುವುದು. ಆಸ್ಥೇಯ ಎಂದರೆ ಕಳ್ಳತನ ಮಾಡದೇ ಇರುವುದು. ಬ್ರಹ್ಮಚರ್ಯ ಅಂದರೆ ಬ್ರಹ್ಮನ ಕಡೆ ಚಲಿಸುವುದು. ಸದಾಚಾರ ಸದ್ ಗ್ರಂಥಗಳ ಅಧ್ಯಯನ ಸತ್ಸಂಗ ಮಾಡುವುದು ಇತ್ಯಾದಿ ಹಾಗೂ ಇಂದ್ರಿಯ ನಿಗ್ರಹ. ಅಪರಿಗ್ರಹ ಎಂದರೆ ಅಗತ್ಯಕ್ಕಿಂತ ಹೆಚ್ಚಿನದನ್ನ ಸಂಗ್ರಹಿಸದೇ ಇರುವುದು ನಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸುವುದು ಎಂದರ್ಥ.
  2. ನಿಯಮಗಳು- ಶೌಚ ಎಂದರೆ ಮನಸ್ಸು ಹಾಗೂ ದೈಹಿಕ ಶುದ್ಧತೆ, ಬಾಹ್ಯ ಹಾಗೂ ಆಂತರಿಕ ಶೌಚ. ಪ್ರತಿನಿತ್ಯ ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸುವುದರಿಂದ ಬಾಹ್ಯ ಶುದ್ಧಿ ಆಗುತ್ತದೆ. ಆಂತರಿಕ ಶುದ್ಧೆತೆಯಲ್ಲಿ ನಮ್ಮ ಭಾವನೆಗಳ ಶುದ್ದಿ ಮಾತುಗಳಲ್ಲಿ ಶುದ್ಧತೆ ಇರುವುದು. ಸಂತೋಷವಾಗಿರುವುದು ನಾವು ಏನೇ ಮಾಡಲಿ ನಾವು ಸಂತೋಷದಂತಿರುವುದು ತೃಪ್ತಿ ಇರುವುದು. ತಪ ಎಂದರೆ ಸುಡುವುದು. ಅತಿಯಾದ ಆಸೆಯನ್ನು ಸುಡುವುದು ಎಂದರ್ಥ. ಮನಸ್ಸನ್ನು ನಿಗ್ರಹಿಸುವುದು ಎಂದು ಇನ್ನೊಂದು ಅರ್ಥವಿದೆ. ಸ್ವಾಧ್ಯಾಯ ಸಜ್ಜನರ ಸಹವಾಸ, ಸತ್ಸಂಗ, ಅಧ್ಯಯನ ಮಾಡಿ ನಮ್ಮ ಜ್ಞಾನವನ್ನು ಹೆಚ್ಚಿಸುವುದು. ಈಶ್ವರ ಪ್ರಣಿದಾನವೆಂದರೆ ಭಗವಂತನಲ್ಲಿ ಸಮರ್ಪಣೆ ಮಾಡುವುದು.
  3. ಆಸನಗಳು- ನಾವು ಈಗಿನ ಯೋಗಾಸನಗಳನ್ನು ಮಾಡುವುದೇ ಆಸನಗಳು. ದೇಹದ ದೃಢತೆ ಹಾಗೂ ಮಾನಸಿಕ ಸ್ಥಿರತೆಗೆ ಯೋಗಾಸನಗಳು ಒಳ್ಳೆಯದು. ಇದನ್ನು ಕ್ರಮಬದ್ದವಾಗಿ ಮಾಡಬೇಕು. ನಿಂತುಕೊಂಡು ಕುಳಿತುಕೊಂಡು ಹೊಟ್ಟೆಯ ಮೇಲೆ ಮಲಗಿ, ಬೆನ್ನಿನ ಮೇಲೆ ಮಲಗಿ ಅನೇಕ ಆಸನಗಳನ್ನು ಮಾಡುವುದು. ವೃಕ್ಷಾಸನ, ತಾಡಾಸನ, ವಜ್ರಾಸನ, ಪದ್ಮಾಸನ, ಪಾದಹಸ್ತಾಸನ, ಪವನಮುಕ್ತಾಸನ, ಉಷ್ಟ್ರಾಸನ, ನೌಕಾಸನ ಮುಂತಾದವುಗಳು. ಯೋಗಾಸನಗಳನ್ನು ಮಾಡುವುದರಿಂದ ನಮ್ಮ ದೇಹಕ್ಕೆ ಬಲ ನೀಡುವುದಲ್ಲದೆ ದೇಹದ ಒಳಗಿನ ಅಂಗಗಳು ಕೂಡ ಕ್ರಿಯಾಶೀಲವಾಗುತ್ತದೆ.
  4. ಪ್ರಾಣಾಯಾಮ – ಉಚ್ವಾಸ ನಿಶ್ವಾಸಗಳ ಗತಿಯನ್ನು ವಿಚ್ಛೇದಿಸುವುದು ಪ್ರಾಣಾಯಾಮ. ಇದರಲ್ಲಿ ಅನೇಕ ವಿಧಗಳಿವೆ. ಶುದ್ಧವಾದ ಪರಿಸರದಲ್ಲಿ ಸಾಧ್ಯವಾದಲ್ಲಿ ಪದ್ಮಾಸನ, ವಜ್ರಾಸನ ಅಥವಾ ಯಾವುದೇ ಸುಖಾಸನದಲ್ಲಿ ಕುಳಿತುಕೊಂಡು ಪ್ರಾಣಾಯಾಮವನ್ನು ಮಾಡಬೇಕು. ಬೆನ್ನು ನೇರವಾಗಿರುವುದು ಮುಖ್ಯ. ಇದರಲ್ಲಿ ಮುದ್ರೆಗಳು ಕೂಡ ಮುಖ್ಯ ಪಾತ್ರ ವಹಿಸುತ್ತದೆ. ನಾಸಿಕಾ ಮುದ್ರೆ, ಆದಿಮುದ್ರೆ, ಬ್ರಹ್ಮ ಮುದ್ರೆ ಇತ್ಯಾದಿ. ಪ್ರತಿನಿತ್ಯ ಮಾಡುವ ಪ್ರಾಣಾಯಾಮದಲ್ಲಿ ಕಪಾಲಭಾತಿ, ನಾಡಿಶೋಧನ, ಅನುಲೋಮ, ವಿಲೋಮ, ಬ್ರಾಹ್ಮರಿ, ಬಸ್ತ್ರಿಕ, ಉಜ್ಜಯಿ ಪ್ರಾಣಾಯಾಮ ಮಾಡಿದರೆ ಒಳ್ಳೆಯದು.
  5. ಪ್ರತ್ಯಹಾರ – ಪಂಚೇಂದ್ರಿಯಗಳಿಗೆ ಅಂತರ್ಮುಖಿಯಾಗಿಸುವುದು ಪ್ರತ್ಯಾಹಾರವೆನಿಸುತ್ತದೆ.
  6. ಧಾರಣ – ಮನಸ್ಸನ್ನು ಅಂತರ್ಮುಖಿಯನ್ನಾಗಿಸುವ ಪ್ರಯತ್ನ ಮಾಡುವುದು.
  7. ಧ್ಯಾನ- ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದು.
  8. ಸಮಾಧಿ – ಅಷ್ಟಾಂಗ ಯೋಗದ ಕೊನೆಯ ಮೆಟ್ಟಿಲು ಸಮಾದಿ. ಧ್ಯಾನದ ಸ್ಥಿತಿಯಲ್ಲಿ ತಲ್ಲಿನವಾಗುವುದು. ಎಲ್ಲಾ ವಸ್ತುವಿನಲ್ಲಿ ತಾನೆ ಕಾಣಿಸಿಕೊಳ್ಳುವುದು. ಆನಂದವನ್ನು ಅನುಭವಿಸುವುದು. ಆ ವಸ್ತು ಬೇರೆಯಲ್ಲ ನಾನು ಬೇರೆಯಲ್ಲ ಎನಿಸುವುದು. ಮೊದಲು ಮನಸ್ಸನ್ನು ಶುದ್ಧೀಕರಿಸಿ ನಂತರ ದೇಹವನ್ನು ಶುದ್ಧ ಮಾಡಿ ಯೋಗಾಸನ ಪ್ರಾಣಾಯಾಮಧ್ಯಾನವನ್ನು ಮಾಡುವುದನ್ನು ರೂಡಿಸಿಕೊಳ್ಳಿ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಡಾ. ಹರ್ಷಾ ಕಾಮತ್











































































error: Content is protected !!
Scroll to Top