ಸಾರ್ವಜನಿಕರ ಮನವಿಗೆ ಸ್ಪಂದಿಸಿದರೆ ತುಘಲಕ್ ದರ್ಬಾರಾಗುವುದೇ ?

ಕಾಂಗ್ರೇಸ್ ನಿಯೋಗ ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡಲಿದೆ – ತಡೆಯುವ ಶಕ್ತಿ ಇದ್ದರೆ ತಡೆಯಿರಿ – ಶುಭದ ರಾವ್‌ ಸವಾಲು

ಕಾರ್ಕಳ : ಸರಕಾರಿ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಗಮನಹರಿಸುವಂತೆ ಕ್ಷೇತ್ರದ ಮತದಾರರು ಪದೇ ಪದೆ ತಮ್ಮನ್ನು ಮನವಿ ಮಾಡಿಕೊಂಡ ಮೇರೆಗೆ ಉದಯ್ ಶೆಟ್ಟಿ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿರುತ್ತಾರೆ ಎಂದು ಕಾಂಗ್ರೆಸ್‌ ವಕ್ತಾರ ಶುಭದ ರಾವ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉದಯ ಶೆಟ್ಟಿ ಅವರು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಭೆ ನಡೆಯುತ್ತಿತ್ತು. ಈ ವೇಳೆ ಕುಶಲೋಪರಿಯಾಗಿ ಉದಯ ಶೆಟ್ಟಿ ಅವರು ಮಾತನಾಡಿದ್ದಾರೆ. ಅನಂತರ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ‌ ಸಮಸ್ಯೆಯನ್ನು ಆಲಿಸಿದ್ದಾರೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುದಾಗಿ ಭರವಸೆ ನೀಡಿರುತ್ತಾರೆ. ಅಷ್ಟೇ ವಿನಹ ಬೇರೇನೂ ಇಲ್ಲ. ಇದನ್ನು ಸಹಿಸದ ಬಿಜೆಪಿಯ ಮುಖಂಡರು ಆಸ್ಪತ್ರೆಯಲ್ಲಿ ಕಳೆದು ಹೋದ ತನ್ನ ‌ಮಾನವನ್ನು ಉಳಿಸಿಕೊಳ್ಳಲು ಇಲ್ಲ ಸಲ್ಲದ ಕಥೆ ಕಟ್ಟಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸಿದರೆ ಅದು ತುಘಲಕ್ ದರ್ಬಾರ್ ಆಗುವುದೇ ? ಗೆದ್ದವರು ಕರ್ತವ್ಯ ಮರೆತು ನಿರ್ಲಕ್ಷ್ಯ ವಹಿಸಿದಾಗ ಸೋತವರು ಸ್ಪಂದಿಸುವುದು ತಪ್ಪೇ ? ಎಂದು ಶುಭದ ರಾವ್‌ ಪ್ರಶ್ನಿಸಿದರು.

ತಡೆಯಿರಿ – ಸವಾಲು
ಕಾಂಗ್ರೆಸ್ ನಿಯೋಗ ಪ್ರತಿ ತಿಂಗಳು ಕಾರ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ‌ ನೀಡಲಿದೆ. ಅದನ್ನು ತಡೆಯುವ ಶಕ್ತಿ ಇದ್ದರೆ ತಡೆಯಿರಿ ಎಂದು ಶುಭದ ರಾವ್ ಸವಾಲೆಸೆದರು.

ಮೌನವಹಿಸಿದ್ದು ಯಾಕೆ ?
ತಿಂಗಳಿಗೆ 150 ಹೆಚ್ಚು ಹೆರಿಗೆಯಾಗುತ್ತಿದ್ದ ಆಸ್ಪತ್ರೆಯಲ್ಲಿ‌ ಪ್ರಸೂತಿ ವೈದ್ಯರಿಲ್ಲದೇ ಈಗ ಅದು 20ಕ್ಕೆ ಬಂದು ನಿಂತಿದೆ. ಡಯಾಲಿಸಿಸ್ ಕೇಂದ್ರ, ಮಕ್ಕಳ ಪೌಷ್ಟಿಕಾಂಶ ಕೇಂದ್ರ, ಸ್ಕ್ಯಾನಿಂಗ್ ಕೇಂದ್ರ, ಎಕ್ಸ್‌ ರೇ ಕೇಂದ್ರದ ಮತ್ತು ಡಿʼ ‌ಗ್ರೂಪ್ ನೌಕರರು ಹೀಗೆ ಒಟ್ಟು 40 ಕ್ಕೂ ಹೆಚ್ಚು ‌ಹುದ್ದೆಗಳು ಖಾಲಿಯಿದೆ. ಹೀಗಾಗಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ‌ಲಭ್ಯವಾಗುತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ತಮ್ಮ ಸರಕಾರವಿದ್ದರೂ ಸಚಿವರು ಮತ್ತು ‌ಪಕ್ಷದ‌ ಮುಖಂಡರು ಅದಕ್ಕೆ ಪರಿಹಾರ ಕಂಡುಕೊಳ್ಳದೆ ಮೌನವಹಿಸಿದ್ದು ಯಾಕೆ ? ಎಂದು ಶುಭದ ಪ್ರಶ್ನಿಸಿದ್ದಾರೆ.

ನಾವು ಬೆವರಿಳಿಸಿದ್ದೇವೆ
ಸೋಲು – ಗೆಲುವು ಶಾಶ್ವತ ಅಲ್ಲ. ಸೋತಿದ್ದೀರಿ ಎಂದು ಹೀಯಾಳಿಸಬೇಡಿ. ನಮ್ಮ ಗೆಲುವು ಅಭೂತಪೂರ್ವವಲ್ಲ‌, ಮಾನ ಉಳಿಸಿದ ಗೆಲುವು ಎಂದು ನಿಮ್ಮ ಹಿರಿಯ‌ ನಾಯಕರೇ ಹೇಳಿದ್ದಾರೆ. ಆದರೆ, ನಾವು ಸೋತರೂ ಎರಡು ಖಾತೆಯ ಸಚಿವರಾಗಿದ್ದವರ ಬೆವರಿಳಿಸಿದ್ದೇವೆ ಎನ್ನುವುದು ನೆನಪಿರಲಿ ಎಂದು ಶುಭದ ಹೇಳಿದ್ದಾರೆ.

ಮನವಿ ಮಾಡಿದ್ದು ತಾವೇ ಅಲ್ಲವೇ !
ನಿಮ್ಮ ಶಾಸಕರು ಸೋತು ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದಾಗ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಕೋಟಿ – ಚೆನ್ನಯ ಪಾರ್ಕ್ ‌ಉದ್ಘಾಟನೆಯಲ್ಲಿ ಕರೆಯದೆ ವೇದಿಕೆಯಲ್ಲಿ ಕುಳಿತು ಸನ್ಮಾನವನ್ನೂ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಬಂಡಿಮಠ ಬಸ್‌ ನಿಲ್ದಾಣದ ಉದ್ಘಾಟನೆಗೆ ಅವರನ್ನು ಅತಿಥಿಯಾಗಿ ಕರೆಯಬೇಕೆಂದು ಮನವಿ ಮಾಡಿದ್ದು ತಾವೇ ಅಲ್ಲವೇ ಎಂದು ಬಿಜೆಪಿ ವಕ್ತಾರರನ್ನು ಶುಭದ ಕುಟುಕಿದ್ದಾರೆ.

ಸ್ಪಂದನೆ ನಿರಂತರ
‌ಸಾರ್ವಜನಿಕರ ಮನವಿಗೆ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ. ಸರಕಾರದಿಂದ ಸಿಗುವ‌ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ‌ ಪ್ರಯತ್ನ ಮಾಡುತ್ತೇವೆ. ನಮ್ಮ ಜೊತೆ ತಾವು ಕೂಡ ಕೈ ಜೋಡಿಸಿ, ಅನಗತ್ಯ ಹೇಳಿಕೆ‌ ನೀಡುವುದನ್ನು ನಿಲ್ಲಿಸಿ ಎಂದು ಪ್ರಕಟನೆಯಲ್ಲಿ ಶುಭದ ರಾವ್‌ ತಾಕೀತು ಮಾಡಿದ್ದಾರೆ.











































































error: Content is protected !!
Scroll to Top