ಜು. 3 ರೊಳಗೆ ವಿರೋಧ ಪಕ್ಷ ನಾಯಕನ ಆಯ್ಕೆ !

ಚಾಮರಾಜನಗರ : ಕೊನೆಗೂ ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆಗೆ ಮುಹೂರ್ತ ಕೂಡಿಬಂದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದ ಬಳಿಕ ಪ್ರತಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಮುಂದಾಗಿದೆ. ಮುಂದಿನ ತಿಂಗಳು ಅಂದರೆ ಜು. 3ರೊಳಗೆ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತೆ ಎಂದು ಸ್ವತಃ ಸಂಸದ ಡಿ. ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಜೂ.22 ರಂದು ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸದಾನಂದ ಗೌಡ, ಪ್ರತಿಪಕ್ಷ ನಾಯಕನ ಆಯ್ಕೆ ನಾವು ಮಾಡುವ ತೀರ್ಮಾನ ಅಲ್ಲ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ಗೆ ಸವಾಲು ಹಾಕುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ಕೊಡುತ್ತೇವೆ. ಅಳೆದು ತೂಗಿ ರಾಷ್ಟ್ರೀಯ ನಾಯಕರು ವಿಪಕ್ಷ ನಾಯಕನನ್ನು ಮಾಡುತ್ತಾರೆ ಎಂದರು. ಜು. 3ರಿಂದ 10 ದಿನ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಜು. 7ರಂದು ಸಿದ್ದರಾಮಯ್ಯನವರು ಈ ಅವಧಿಯ ಮೊದಲ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಅಧಿವೇಶನ ಆರಂಭಕ್ಕೂ ಮುನ್ನ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್​ ಮುಂದಾಗಿದೆ. ಹೀಗಾಗಿ ಯಾರನ್ನು ಮಾಡಿದರೆ ಸೂಕ್ತ ಎಂದು ಬೇರೆ ಬೇರೆ ಮಾರ್ಗಗಳಲ್ಲಿ ಚಿಂತನೆ ನಡೆಸಿದೆ. ಅಲ್ಲದೇ ಪಕ್ಷದ ಇತರೆ ನಾಯಕರುಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ ಎನ್ನಲಾಗಿದೆ.

ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಪ್ರಬಲವಾಗಿ ಕೇಳಿಬರುತ್ತಿವೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಸೂಕ್ತ ಎನ್ನುವುದು ಕಾರ್ಯಕರ್ತರ ಅಭಿಪ್ರಾಯಗಳಾವೆ. ಆದ್ರೆ, ಹೈಕಮಾಂಡ್​ ಯತ್ನಾಳ್​ ಅವರಿಗೆ ಮಣೆ ಹಾಕುವುದು ಅನುಮಾನ. ಸದನದಲ್ಲಿ ಸರಕಾರವನ್ನು ಎದುರಿಸಲು ಸಂಸದೀಯ ಪಟು ಆಗಿರಬೇಕು. ಹಣಕಾಸು, ನೀರಾವರಿ ಮತ್ತಿತರ ವಿಷಯಗಳ ಬಗ್ಗೆ ಆಳ ಜ್ಞಾನ ಹೊಂದಿರಬೇಕು. ಈ ಎಲ್ಲಾ ಜ್ಞಾನ ಬಸವರಾಜ್ ಬೊಮ್ಮಾಯಿ ಅವರಲ್ಲಿದೆ. ಹೀಗಾಗಿ ಹೈಕಮಾಂಡ್​ ಬೊಮ್ಮಾಯಿ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ನಿಕಟಪೂರ್ವ ಸಿಎಂ ಆಗಿರುವ ಕಾರಣ ವಿಪಕ್ಷ ನಾಯಕ ಸ್ಥಾನ‌ ನೀಡುವುದು ಸಂಪ್ರದಾಯವಾಗಿರುವುದು ಕೂಡಾ ಬೊಮ್ಮಾಯಿ ಅವರಿಗೆ ಪ್ಲಸ್ ಆಗಲಿದೆ. ಪಕ್ಷದ ಪದಾಧಿಕಾರಿಗಳು, ಸಂಸದರು ಮತ್ತು ಕೆಲವು ಶಾಸಕರಿಂದಲೂ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಪ್ರಬಲ ಹಿಂದುತ್ವದ ಪ್ರತಿಪಾದನೆ ಒಂದೇ ಯತ್ನಾಳ್​ಗೆ ಪ್ಲಸ್ ಆಗಿದೆ. ಅಲ್ಲದೇ ಕಾಂಗ್ರೆಸ್ ನಾಯಕರ ಜೊತೆ ರಾಜಿಯಾಗದ ಸ್ವಭಾವವೂ ಯತ್ನಾಳ್ ಇನ್ನೊಂದು ಪ್ಲಸ್. ಈ ಮಧ್ಯೆ ತಮ್ಮ ಪ್ರಭಾವ ಬಳಸಿ ವಿಪಕ್ಷ ನಾಯಕ ಸ್ಥಾನಕ್ಕೆ ಶಾಸಕ ಅರವಿಂದ ಬೆಲ್ಲದ್ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ವಿರೋಧ ಪಕ್ಷ ನಾಯಕನ ಆಯ್ಕೆ ನಡುವೆಯೇ ರಾಜ್ಯಾಧ್ಯಕ್ಷರ ಬದಲಾವಣೆ
ವಿರೋಧ ಪಕ್ಷದ ನಾಯಕನ ಆಯ್ಕೆ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ನಡೆದಿವೆ. ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲೇ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಹೈಕಮಾಂಡ್​ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಒಟ್ಟಿಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಾ. ಅಶ್ವಥ್ ನಾರಾಯಣ, ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಆರ್. ಅಶೋಕ್ ಹಾಗೂ ಶಾಸಕ ಸುನೀಲ್ ಹೆಸರುಗಳು ಕೇಳಿಬರುತ್ತಿವೆ.











































































error: Content is protected !!
Scroll to Top