ನಾಯಕರಾಗಿ ಅಭಿಷೇಕ್ ಜೆ. ಮತ್ತು ಧ್ರುವ ಆರ್. ಕಾಮತ್ ಆಯ್ಕೆ
ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ ಜೂ. 22 ರಂದು ಜರುಗಿತು. ಈ ಸಂದರ್ಭ ಮಾತನಾಡಿದ ಮತದಾರ ಸಾಕ್ಷರತಾ ಸಂಘದ ನೋಡೆಲ್ ಶಿಕ್ಷಕ ದಿವ್ಯಾ ಕುಮಾರ್ ಸಿ. ಕೆ. ಅವರು, ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ದೊರೆಯುವ ಅಮೂಲ್ಯ ಹಕ್ಕು. ತನ್ಮೂಲಕ ದೇಶದ ಪ್ರಗತಿಯೊಂದಿಗೆ ಸುಭದ್ರತೆಯನ್ನು ಕಾಯ್ದುಕೊಳ್ಳಬಹುದು. ಈ ನಿಟ್ಟಿನಲ್ಲಿ ಚುನಾವಣೆಯ ಮಹತ್ವ ಮತ್ತು ನಾಯಕನ ಜವಾಬ್ದಾರಿಯನ್ನು ತಿಳಿಸುವಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ ಮಾದರಿಯಾಗಲಿ ಎಂದರು.
ಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈಯವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಗಳಾಗಿ, ಪೋಲಿಂಗ್ ಅಧಿಕಾರಿಗಳಾಗಿ, ಹಾಗೂ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರದ ಅಧಿಕಾರಿಗಳಾಗಿ ಶಾಲಾ ಶಿಕ್ಷಕರು ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣಾ ಮತಗಟ್ಟೆ ಕರ್ತವ್ಯವನ್ನು ತಿಳಿಸಿದರು. ಇವಿಎಂ ಮೆಷಿನ್ ಮೂಲಕ ಮತದಾನ ನಡೆದಿದ್ದು, ಮತದಾರರ ಪಟ್ಟಿ , ಅಭ್ಯರ್ಥಿಗಳಿಗೆ ಚಿಹ್ನೆ, ಕೈ ಬೆರಳಿಗೆ ಶಾಯಿ ಗುರುತು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ನಂತರ, ಮತ ಎಣಿಕೆ ಸಂದರ್ಭ ಕಟ್ಟುನಿಟ್ಟಿನ ಕಾನೂನು ಪಾಲನೆಯ ಕುರಿತು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಲಾಯಿತು. ಶಾರೀರಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್ ಅವರು ಮತದಾನ ಪ್ರಕ್ರಿಯೆ ನಡೆಸಿಕೊಟ್ಟರು.

ಕನ್ನಡ ಮಾಧ್ಯಮ ವಿಭಾಗದಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಅಭಿಷೇಕ್ ಜೆ. ಹಾಗೂ ಅಜೇಯ್ ಅವರ ನಡುವೆ ನೇರ ಸ್ಪರ್ಧೆಯಿದ್ದು, ಅಭಿಷೇಕ್ ಜೆ. ವಿಜಯಿಯಾಗಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆಂಗ್ಲ ಮಾಧ್ಯಮ ವಿಭಾಗದಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಧ್ರುವ ಆರ್. ಕಾಮತ್, ಮನೋಜ್ ಪೈ ಹಾಗೂ ಅನನ್ಯಾ ಅವರ ನಡುವೆ ಸ್ಪರ್ಧೆ ನಡೆದಿದ್ದು, ಧ್ರುವ ಆರ್. ಕಾಮತ್ ಬಹುಮತ ಪಡೆಯುವುದರೊಂದಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.





































