ದುಬಾರಿ ಪ್ರವಾಸದ ಸಬ್‌ಮೆರಿನ್‌ನಲ್ಲಿದ್ದಾರೆ ಐವರು ಶ್ರೀಮಂತರು
ವಾಷಿಂಗ್ಟನ್: ಸಮುದ್ರದಾಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವ ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆ ತೆರಳಿ ದಿಢೀರ್ ನಾಪತ್ತೆಯಾದ ಕಿರು ಜಲಾಂತರ್ಗಾಮಿ ನೌಕೆಯ ಪತ್ತೆಗಾಗಿ ತೀವ್ರ ಶೋಧ ನಡೆಯುತ್ತಿದೆ. ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ನ ತಜ್ಞರ ತಂಡ ಹುಡುಕಾಟ ಮುಂದುವರಿಸಿದೆ. ಈ ನಡುವೆ ಹುಡುಕಾಟದಲ್ಲಿ ತೊಡಗಿರುವ ತಂಡವೊಂದು ಸಮುದ್ರದಾಳದಿಂದ ಪ್ರತಿ 30 ನಿಮಿಷಕ್ಕೆ ‘ಬಡಿತದ ಶಬ್ದ’ವನ್ನು ಪತ್ತೆ ಮಾಡಿದೆ. ಹೀಗಾಗಿ ಸಬ್‌ಮರೀನ್‌ನಲ್ಲಿದ್ದ ಐವರು ಬದುಕುಳಿದಿರುವ ಸಣ್ಣದೊಂದು ಆಶಾಭಾವನೆ ವ್ಯಕ್ತವಾಗಿದೆ.
ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಶೀಘ್ರವೇ ಪ್ರವಾಸಿ ಸಬ್‌ಮರೀನ್ ಪತ್ತೆಯಾಗದೆ ಹೋದಲ್ಲಿ ಅದರಲ್ಲಿದ್ದವರು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಮೆರಿಕ, ಸ್ಪೇನ್, ಕೆನಡಾದ ಸಬ್‌ಮರೀನ್, ವಿಮಾನಗಳನ್ನು ಬಳಸಿಕೊಂಡು ಭಾರಿ ಪ್ರಮಾಣದಲ್ಲಿ ಹುಡುಕಾಟ ಮುಂದುವರಿಸಲಾಗಿದೆ. ಈ ನಡುವೆ ಹುಡುಕಾಟದಲ್ಲಿ ತೊಡಗಿದ್ದ ಕೆನಡಾದ ಪಿ3 ವಿಮಾನಕ್ಕೆ ಸಮುದ್ರದೊಳಗಿಂತ ಪದೇಪದೆ ಸದ್ದೊಂದು ಕೇಳಿಬರುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಇದೀಗ ತಪಾಸಣೆಯನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ.
ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸಿಗರ ಹೊತ್ತಯ್ದು ಬಳಿಕ ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದು, ಅದರಲ್ಲಿ ಪಾಕಿಸ್ಥಾನದ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. 1912ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿದೆ.
ದುಬಾರಿ ಪ್ರವಾಸ
ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ 3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. ಜೂ.18ರಂದು ಸಬ್‌ಮರೀನ್ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು.
1912 ರಲ್ಲಿ ಮುಳುಗಿದ ಪ್ರವಾಸಿ ಹಡಗು ಟೈಟಾನಿಕ್ ಅವಶೇಷ ಸೈಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ.
ಈ ಜಲಂತರ್ಗಾಮಿ ನೌಕೆಯಲ್ಲಿ ಪಾಕಿಸ್ಥಾನ ಮೂಲದ ಬ್ರಿಟನ್‌ನಲ್ಲಿ ನೆಲೆಯಾಗಿರುವ ಪ್ರಸಿದ್ಧ ಉದ್ಯಮಿ ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ಹೊರಟಿದ್ದರು. ಈ ವಿಚಾರವನ್ನು ಅವರ ಕುಟುಂಬ ದೃಢಪಡಿಸಿದೆ. ಇವರಿಬ್ಬರ ಜತೆಗೆ, ಬ್ರಿಟಿಷ್ ಸಾಹಸಿ ಹಮೀಶ್ ಹಾರ್ಡಿಂಗ್ ಕೂಡ ಈ ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದಾರೆ. ನ್ಯೂಫೌಂಡ್‌ಲ್ಯಾಂಡ್‌ನಲ್ಲಿ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದೆನಿಸಿದ ಚಳಿಗಾಲದ ಕಾರಣ, ಈ ಪ್ರವಾಸವೂ 2023 ರಲ್ಲಿ ಟೈಟಾನಿಕ್‌ಗೆ ತೆರಳುತ್ತಿರುವ ಮೊದಲ ಮತ್ತು ಏಕೈಕ ಮಾನವಸಹಿತ ನೌಕೆ ಆಗಿರಬಹುದು ಎಂದು ಅವರು ಪ್ರವಾಸದ ಆರಂಭದಲ್ಲಿ ಹಾಕಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾರ್ಡಿಂಗ್ ಹೇಳಿದ್ದರು.































































