ಕಾರ್ಕಳ : ಜಿಲ್ಲಾ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ. ಹೆಚ್. ಕೃಷ್ಣಪ್ಪ ಅವರು ಜೂ. 19ರಂದು ಕಾರ್ಕಳ ನಗರದ ಕಾಳಿಕಾಂಬಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿದರು. ಕಳೆದ ಶುಕ್ರವಾರ ಪುರಸಭಾ ಸದಸ್ಯ ಶುಭದ ರಾವ್ ಅವರು ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಮತ್ತು ಇಲಾಖೆಯ ತಾಲೂಕು ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಸೋಮವಾರ ಬಿ.ಹೆಚ್. ಕೃಷ್ಣಪ್ಪ ಅವರು ಭೇಟಿ ನೀಡಿ ಆಹಾರ ಪದಾರ್ಥ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ಹಾಗೂ ಪುಟಾಣಿಗಳಿಗೆ ನೀಡುವ ಆಹಾರ ಪದಾರ್ಥ ಉತ್ತಮ ಗುಣಮಟ್ಟದಾಗಿರಬೇಕು. ಈ ಬಗ್ಗೆ ನಿರ್ಲಕ್ಷ್ಯ ಸಹಿಸುವುದಿಲ್ಲ. ಸಂಬಂಧಪಟ್ಟ ವಿತರಕರು ಎಚ್ಚರ ವಹಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು. ಪುರಸಭಾ ಸದಸ್ಯ ಶುಭದ ರಾವ್, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪುಷ್ಪರಾಣಿ ಹೆಚ್., ವಲಯ ಮೇಲ್ವಿಚಾರಕಿ ಉಮಾ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಉಪ ನಿರ್ದೇಶಕರ ಭೇಟಿ : ಆಹಾರ ಗುಣಮಟ್ಟದ ಪರಿಶೀಲನೆ






























































