16 ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ವಸ್ತುಗಳ ವಿತರಣೆ
ಕಾರ್ಕಳ : ಸಮಾನ ಮನಸ್ಕರೆಲ್ಲರೂ ಒಗ್ಗೂಡಿದಾಗ ಸಮಾಜದಲ್ಲಿ ಒಳ್ಳೇಯ ಕೆಲಸ ಮಾಡಲು ಸಾಧ್ಯ ಎಂದು ಶಶಿಧರ ಪುರೋಹಿತ್ ಕಟಪಾಡಿ ತಿಳಿಸಿದರು. ಅವರು ಜೂ18ರಂದು ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸಮಾನ ಮನಸ್ಕರ ದಾನಿಗಳ ಸಹಕಾರದಿಂದ ಕಾರ್ಕಳದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಸಾಮಾಜಿಕ, ಧಾರ್ಮಿಕವಾಗಿ ಮತ್ತು ಸಂಸ್ಕಾರಯುತರಾಗಿ ಸೇವಾ ಮನೋಭಾವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಬಳಿಕ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ 16 ಶಾಲೆಯ 172 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಸಮಾಜದಲ್ಲಿ ಎಲ್ಲರೂ ಡಾಕ್ಟರ್ ಇಂಜನೀಯರ್ ಆಗುವುದರೊಂದಿಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ಮುನ್ನಡೆದು, ವಿಶ್ವಕರ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಉಮೇಶ್ ಆಚಾರ್ಯ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಕ್ಲಾಜೆ ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ವಿ.ಬಿ.ಎಸ್.ಸಭಾದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್ ಆಚಾರ್ಯ ನಿಟ್ಟೆ ಉಪಸ್ಥಿತರಿದ್ದರು.

ಸಮಾನ ಮನಸ್ಕ ತಂಡದ ಸದಸ್ಯರಾದ ಯಶವಂತ್ ಆಚಾರ್ಯ ಬಜಗೋಳಿ, ಸುರೇಶ್ ಆಚಾರ್ಯ, ದಿನೇಶ್ ಆಚಾರ್ಯ ಅತ್ತೂರು, ಪ್ರವೀಣ್ ಆಚಾರ್ಯ ಅತ್ತೂರು, ದರ್ಶಿತ್ ಆಚಾರ್ಯ ಅತ್ತೂರು, ಧನುಶ್ ಆಚಾರ್ಯ, ವಿಜಯ್ ಆಚಾರ್ಯ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾಣೂರು ಸರಕಾರಿ ಮುದ್ದಣ್ಣ ನಗರ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೈದು, ಚಿನ್ನ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಪ್ರಸ್ತಾವನೆ ಗೈದು ಸ್ವಾಗತಿಸಿದರು. ವಿಶ್ವಕರ್ಮ ಮಹಿಳಾ ಮಂಡಳಿಯ ಕಾರ್ಯದರ್ಶಿ ಗೀತಾ ಚಂದ್ರ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ತೆಳ್ಳಾರು ವಿಶ್ವನಾಥ ಆಚಾರ್ಯ ವಂದಿಸಿದರು.






























































