ಆದಿಪುರುಷ ಎಂಬ ಆಧುನಿಕ ರಾಮಾಯಣ

ಕಡಿಮೆ ಮೌಲ್ಯಗಳು ಮತ್ತು ಹೆಚ್ಚು ಡಿಜಿಟಲ್ ತಂತ್ರಜ್ಞಾನ

ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯವನ್ನು ನಾವು ಯಾವೆಲ್ಲ ಫಾರ್ಮಾಟ್‌ನಲ್ಲಿ ನೋಡಿದ್ದೇವೆ ಅಲ್ವಾ? ಕನ್ನಡ, ತೆಲುಗು ಸಿನಿಮಾಗಳು, ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ, ಯಕ್ಷಗಾನ, ನಾಟಕ, ಕಾಮಿಕ್ಸ್ ರಾಮಾಯಣ… ಹೀಗೆ ಹಲವು ಫಾರ್ಮಾಟ್ ರೂಪದಲ್ಲಿ ನಾವು ನೋಡಿದ್ದೇವೆ. ಇದೀಗ ರಾಮಾಯಣದ (ಅರ್ಧ) ಕಥೆಯನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ನೋಡಿದರೆ ಹೇಗಿರಬಹುದು? ಅದಕ್ಕೆ ನಿಮಗೆ ದೊರೆಯುವ ಉತ್ತರ ಆದಿಪುರುಷ ಸಿನೆಮಾ.
ಓಂ ರಾವುತ್ ಎಂಬ ಮೆಗಾ ಸಿನೆಮಾಗಳ ನಿರ್ದೇಶಕ ಮೂರು ವರ್ಷಗಳ ಹೆಣಗಾಟ ಮಾಡಿ ಈ ಸಿನೆಮಾವನ್ನು ಈ ಶುಕ್ರವಾರ ತೆರೆಗೆ ತಂದಿದ್ದಾರೆ. ದೇಶದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ ಈ ಸಿನೆಮಾ ಹೌಸ್‌ಫುಲ್ ಓಡ್ತಾ ಇದೆ.

ಸಿನೆಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು

ಆದಿ ಕಾವ್ಯ ರಾಮಾಯಣ, ಅದರ ನಾಯಕ ಶ್ರೀರಾಮನ ಆದರ್ಶಗಳು ಭಾರತೀಯರ ಮನೋಭೂಮಿಕೆಯಲ್ಲಿ ಸಾವಿರಾರು ವರ್ಷಗಳಿಂದ ನೆಲೆ ನಿಂತವುಗಳು. ಅದರಲ್ಲಿ ಬರುವ ಪ್ರತಿ ಒಂದು ಪಾತ್ರ, ಪ್ರತಿ ಒಂದು ಸನ್ನಿವೇಶಗಳು ನಿಂತಿರುವುದು ಭಾರತೀಯ ಸನಾತನ ಸಾಂಸ್ಕೃತಿಕ ಮೌಲ್ಯಗಳ ಮೇಲೆಯೇ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹೊಸ್ತಿಲಲ್ಲಿ ಇಡೀ ದೇಶ ನಿಂತಿರುವಾಗ ಇಂತಹ ಒಂದು ಪಾನ್ ಇಂಡಿಯಾ ಸಿನೆಮಾ ಬರ್ತಾ ಇದೆ ಅಂದಾಗ ಬೆಟ್ಟದಷ್ಟು ನಿರೀಕ್ಷೆ ಸಹಜವೇ. ಅದರಲ್ಲಿಯೂ ಬಾಹುಬಲಿ ಹೀರೊ ಪ್ರಭಾಸ್ ಶ್ರೀರಾಮನ ಪಾತ್ರ ಮಾಡ್ತಾ ಇದ್ದಾರೆ ಅಂದಾಗ ಇನ್ನೂ ನಿರೀಕ್ಷೆ ಹೆಚ್ಚಿತ್ತು. ಸೈಫ್ ಆಲಿ ಖಾನ್ ರಾವಣನ ಪಾತ್ರ ಹೇಗೆ ಮಾಡಿರಬಹುದು? ಗ್ಲಾಮರ್ ಗೊಂಬೆ ಕೃತಿ ಸನೂನ್ ಸೀತೆಯ ಪಾತ್ರ ಹೇಗಿರಬಹುದು? ಹೀಗೆಲ್ಲ ನೂರಾರು ನಿರೀಕ್ಷೆಗಳು ಇದ್ದವು.

ಹೆಚ್ಚು ಅಚ್ಚರಿ – ತುಸು ನಿರಾಸೆ

ಆ ನಿರೀಕ್ಷೆಗಳನ್ನು ಹೊತ್ತುಕೊಂಡು ಸಿನೆಮಾ ನೋಡಲು ಬಂದವರಿಗೆ ಮತ್ತು ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ ನೋಡಿದವರಿಗೆ ಆದಿಪುರುಷ ಸಿನೆಮಾ ಕೊಂಚ ನಿರಾಸೆ ಆಗಬಹುದು. ರಾಮನ ವಿಚಿತ್ರವಾದ ಮೀಸೆ, ರಾವಣನ ಹುಲುಸು ಗಡ್ಡ ಮತ್ತು ಗಾಳಿಯಲ್ಲಿ ಹಾರುವ ತಲೆಗಳು, ಇಂದ್ರಜಿತುವಿನ ಮೈ ತುಂಬಾ ಟ್ಯಾಟುಗಳು, ಚಿತ್ರ ವಿಚಿತ್ರವಾದ ವಾನರರ ಮೇಕಪ್ ಮತ್ತು ಡ್ರೆಸ್ ಕೋಡ್, ಹಾಲಿವುಡ್ ಕಾರ್ಟೂನ್ ನೆನಪಿಸುವ ಲಂಕೆಯ ರಾಕ್ಷಸರು ನಿಮಗೆ ಇರಿಸುಮುರಿಸು ತರಬಹುದು. ರಾವಣನ ಪಾತ್ರದ ವೈಭವೀಕರಣಕ್ಕಾಗಿ ಬಳಸಿದ ಹಾವುಗಳ ಮಸಾಜ್, ರುದ್ರ ವೀಣೆಯನ್ನು ನೆಟ್ಟಗೆ ಹಿಡಿದು ನುಡಿಸುವುದು… ಇಂಥದ್ದನ್ನು ಒಪ್ಪಿಕೊಳ್ಳುವುದು ನಮಗೆ ಕಷ್ಟ.
ಆದರೆ ಪುರಾಣದ ಕಡಿಮೆ ಹಿನ್ನೆಲೆ ಇರುವ ಯುವಜನತೆ ಮೂರು ಗಂಟೆ ಸಿನೆಮಾ ಮಂದಿರದಲ್ಲಿ ಉಸಿರು ಬಿಗಿಹಿಡಿದು ಈ ಸಿನೆಮಾ ನೋಡುವಾಗ, ಡಿಜಿಟಲ್ ದೃಶ್ಯಗಳು ಮೈ ನವಿರೇಳಿಸುವ ಅನುಭವವನ್ನು ನೀಡಿದಾಗ ಸಿನೆಮಾ ಗೆಲ್ಲುತ್ತದೆ ಎಂಬ ತೀರ್ಮಾನಕ್ಕೆ ಖಂಡಿತ ಬರಬಹುದು. ರಾಮಾಯಣ ಕೇವಲ ಅಡುಗೂಲಜ್ಜಿ ಕತೆ ಅಲ್ಲ, ಅದಕ್ಕೊಂದು ಆಧುನಿಕ ದೃಷ್ಟಿಕೋನ ಇದೆ ಅನ್ನುವವರಿಗೆ ಈ ಸಿನೆಮಾ ಖಂಡಿತ ಇಷ್ಟ ಆಗುತ್ತದೆ.

ಅದ್ಭುತ ನಿರೂಪಣೆಯ ಮೆಗ್ನಮಾಪಸ್ ಸಿನೆಮಾ ಆದಿಪುರುಷ

ರಾಮಾಯಣದ ಇಡೀ ಕಥೆ ಇಲ್ಲಿಲ್ಲ. ಸೀತಾ ಅಪಹರಣದ ಕತೆಯಿಂದ ಆರಂಭವಾಗಿ ರಾವಣ
ವಧೆಯವರೆಗಿನ ಕತೆಯನ್ನು ಮಾತ್ರ ಇಲ್ಲಿ ಹೇಳಲಾಗಿದೆ. ವಾಲ್ಮೀಕಿ ರಾಮಾಯಣ ನಮಗೆ ಕೇವಲ ಪ್ರೇರಣೆ ಮಾತ್ರ ಎಂದು ನಿರ್ದೇಶಕರು ಆರಂಭದಲ್ಲಿಯೇ ಡಿಸಕ್ಲೈಮರ್ ಮೊರೆ ಹೋಗಿರುವ ಕಾರಣ ಸೇಫ್ ಆಗಿದ್ದಾರೆ. ಮೂಲ ಕತೆ ಎಲ್ಲರಿಗೂ ಗೊತ್ತಿರುವ ಕಾರಣ ಕಥೆಯಿಂದ ನಿರ್ದೇಶಕರು ಹೆಚ್ಚು ಆಚೀಚೆ ಹೋಗಿಲ್ಲ. ಆದರೆ ಕಲ್ಪನೆ, ಫ್ಯಾಂಟಸಿ ಸಿನೆಮಾದಲ್ಲಿ ಹೆಚ್ಚಿದೆ. ಸಿನೆಮಾಕ್ಕೆ ನಿರ್ಮಾಪಕರು 500 ಕೋಟಿ ದುಡ್ಡು ಹಾಕಿದ್ದು ಸಿನೆಮಾವನ್ನು ದೃಶ್ಯ ವೈಭವ ಮಾಡಿಕೊಟ್ಟಿದೆ. ನಿರೂಪಣೆ, ಚಿತ್ರೀಕರಣ, ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್, ಸಿನೆಮಾಟೋಗ್ರಾಫಿ ಎಲ್ಲವೂ ಅದ್ಭುತವೇ ಆಗಿವೆ. ಹಿನ್ನೆಲೆ ಸಂಗೀತ ಮತ್ತು ಎರಡು ಹಾಡುಗಳು (ಶಿವೋಹಮ್ ಮತ್ತು ಜೈ ಶ್ರೀರಾಮ್) ಮಿಂಚು ಹರಿಸುತ್ತವೆ.

VFX ರಿಚ್ ಆದ ಸಿನೆಮಾ

ಕೊನೆಯ 20 ನಿಮಿಷಗಳ ರಾಮ-ರಾವಣರ ಯುದ್ಧ ದೃಶ್ಯಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿವೆ. ಕಲ್ಪನೆಯ ಕಾಮನಬಿಲ್ಲು ಮೂಡಿಸುವ VFX ಮತ್ತು ಕಲರಿಂಗ್, ಸೌಂಡ್ ಅಫೆಕ್ಟ್ ನಮ್ಮನ್ನು ಯಾವುದೋ ಒಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇಲ್ಲೆಲ್ಲ ಈ ಸಿನೆಮಾ ಗೆದ್ದಿದೆ. ಆದರೆ ನೈತಿಕ ಮೌಲ್ಯಗಳು, ಆದರ್ಶಗಳು…ಇವುಗಳನ್ನು ಹುಡುಕಿ ಸಿನೆಮಾ ನೋಡಲು ಬಂದವರಿಗೆ ನಿರಾಸೆ ಖಂಡಿತ ಆಗಬಹುದು. ಯಾಕೆಂದರೆ ಇದು ಆಧುನಿಕ ರಾಮಾಯಣ.

ಭಾವನೆಗಳನ್ನು ಬಡಿದೆಬ್ಬಿಸುತ್ತದೆ ಸಿನೆಮಾ

ನಿರ್ದೇಶಕ ಓಂ ರಾವುತ್ ಅವರು ತಾಂತ್ರಿಕತೆಗೆ ಕೊಟ್ಟ ಮಹತ್ವವನ್ನು ಭಾವನೆಗಳಿಗೂ ಕೊಟ್ಟಿದ್ದಾರೆ. ಜಟಾಯುವಿನ ಅಂತಿಮ ಸಂಸ್ಕಾರ ಶ್ರೀರಾಮ ನೆರವೇರಿಸುವುದು, ಶಬರಿಯ ಎಂಜಲು ಹಣ್ಣು ರಾಮನು ಚಪ್ಪರಿಸಿ ತಿನ್ನುವುದು, ಸೀತೆ ಮತ್ತು ಹನುಮಾನ್ ಸಂವಾದಗಳು, ಶ್ರೀರಾಮನ ಸಿಟ್ಟಿಗೆ ಸಮುದ್ರರಾಜನು ಹೆದರಿ ಪ್ರತ್ಯಕ್ಷ ಆಗುವುದು, ಲಕ್ಷ್ಮಣನು ರಾವಣನ ಮಗ ಇಂದ್ರಜಿತುವಿನ ಮಾಯೆಗೆ ಒಳಗಾಗಿ ಪ್ರಾಣ ಕಳೆದುಕೊಂಡಾಗ ರಾಮನ ದುಃಖ… ಇಂತಹ ದೃಶ್ಯಗಳು ಹೆಚ್ಚು ಎಮೋಷನಲ್ ಆಗಿ ಮೂಡಿಬಂದಿವೆ. ಅದು ಖಂಡಿತವಾಗಿ ಸಿನೆಮಾದ ಗೆಲುವು.

ಪ್ರಭಾಸ್ ಮಿಂಚು ಮತ್ತು ಸೈಫ್ ಆಲಿ ಖಾನ್ ಆಟಿಟ್ಯುಡ್

ಇನ್ನು ಅಭಿನಯದ ವಿಭಾಗಕ್ಕೆ ಬಂದರೆ ರಾಮನ ಪಾತ್ರದಲ್ಲಿ ಪ್ರಭಾಸ್ ನಿಜವಾಗಿ ಮಿಂಚಿದ್ದಾರೆ. ಆದರೆ ಸಿನೆಮಾ ಮುಗಿಸಿ ಹೊರಬಂದು ಎಷ್ಟು ಹೊತ್ತಾದರೂ ರಾವಣನ (ಸೈಫ್ ಆಲಿ ಖಾನ್) ಅಭಿನಯವು ಹೆಚ್ಚು ಇಂಪ್ಯಾಕ್ಟ್ ಕೊಡುತ್ತದೆ. ಹನುಮಂತನಾಗಿ ಮರಾಠಿ ನಟ ದೇವದತ್ತ ನಾಗೆ ಮಿಂಚಿದ್ದಾರೆ. ಸೀತೆಯಾಗಿ ಕೃತಿ ಸನೂನ್ ಗ್ಲಾಮರ್ ಬೊಂಬೆ ಅನ್ನೋದು ಮಾತ್ರ ನೆನಪಲ್ಲಿ ಉಳಿಯುತ್ತದೆ. ಸನ್ನಿ ಸಿಂಗ್ (ಲಕ್ಷ್ಮಣ) ವತ್ಸಲ್ ಸೇಟ್ (ಇಂದ್ರಜಿತು) ಅಭಿನಯ ಪುರಾಣದ ಪಾತ್ರಗಳ ಮಟ್ಟಕ್ಕೆ ಬಂದಿಲ್ಲ.
ವಾನರರನ್ನು ಕಪಿಗಳಾಗಿ ತೋರಿಸದೆ ಚಿಂಪಾಂಜಿ ಮಾಡಿ ತೋರಿಸಿದ್ದು, ಲಂಕೆಯ ರಾಕ್ಷಸರನ್ನು ಹಾಲಿವುಡ್ ಕಾರ್ಟೂನ್ ಮಟ್ಟಕ್ಕೆ ಇಳಿಸಿದ್ದನ್ನು ಒಪ್ಪುವುದು ಕಷ್ಟ.

ಭರತ ವಾಕ್ಯ

ಆದಿಪುರುಷ ಸಿನೆಮಾ ಅದನ್ನು ಪ್ರಭು ಶ್ರೀರಾಮನ ಆದರ್ಶಗಳ ಕಥೆ ಎನ್ನುವುದನ್ನು ಮರೆತು ಅದು ವಾಲ್ಮೀಕಿ ರಾಮಾಯಣದ ಆಧುನಿಕ ಫಾರ್ಮಾಟ್ ಎಂದು ತಲೆಯಲ್ಲಿ ಇಟ್ಟುಕೊಂಡು ಸಿನೆಮಾ ನೋಡಲು ಹೋದರೆ ಒಳ್ಳೆಯದು. ಏನಿದ್ದರೂ ಮೂಲ ಶ್ರೀರಾಮನ ಕಥೆ ಹೆಚ್ಚು ಗೊತ್ತಿಲ್ಲದ ಮಂದಿ ಈ ಸಿನೆಮಾ ಖಂಡಿತವಾಗಿಯೂ ನೋಡಬೇಕು. ಅಷ್ಟರ ಮಟ್ಟಿಗೆ ಆದಿಪುರುಷ ಸಿನೆಮಾ ಗೆದ್ದಿದೆ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.











































































error: Content is protected !!
Scroll to Top