ಸೀತಾನದಿಯಲ್ಲಿ ಸರಣಿ ಅಪಘಾತ : ಚಾಲಕ ಸಾವು

ಈಚರ್‌-ಟಿಪ್ಪರ್‌, ಜೀಪು,ಕಾರು ನಡುವೆ ಅಪಘಾತ

ಹೆಬ್ರಿ : ಹೆಬ್ರಿಯ ಸೀತಾನದಿ ಜಕ್ಕನಮಕ್ಕಿ ಬಳಿ ಹೆಬ್ರಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಟಿಪ್ಪರ್‌ ಮತ್ತು ಈಚರ್‌ ವಾಹನ ನಡುವೆ ನಡೆದ ಭೀಕರ ಅಪಘಾತದಲ್ಲಿ ಈಚರ್‌ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಾತ್ರಿ 7 ಗಂಟೆ ಹೊತ್ತಿಗೆ ಆಗುಂಬೆ ಕಡೆಯಿಂದ ಬರುತ್ತಿದ್ದ ಈಚರ್‌ ವಾಹನ ಎದುರುಗಡೆಯಿಂದ ಬಂದ ಟಿಪ್ಪರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈಚರ್‌ ಚಾಲಕ ಕೊಪ್ಪ ಮೂಲದ ಬಾಲಕೃಷ್ಣ ಜಿ. (58) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಪ್ಪರ್‌ ಹಿಂದೆ ಬರುತ್ತಿದ್ದ ಕಾರುಗಳು ಸರಣಿಯಾಗಿ ಢಿಕ್ಕಿ ಹೊಡೆದು ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು.
ಅಪಘಾತದ ತೀವ್ರತೆಯಿಂದ ಈಚರ್‌ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕನನ್ನು ಹೊರ ತೆಗೆಯಲು ಠಾಣಾಧಿಕಾರಿ ಸುದರ್ಶನ ದೊಡ್ಡಮನಿ ಹಾಗೂ ನಿರಂಜನ್‌ ಹೆಗ್ಡೆ ಸೇರಿದಂತೆ ಪೊಲೀಸರು ಒಂದು ತಾಸಿಗೂ ಹೆಚ್ಚು ಹೊತ್ತು ಸ್ಥಳೀಯರು ಹರಸಾಹಸ ಪಟ್ಟರು.ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದರು.
ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಅಗಲ ಕಿರಿದಾಗಿದ್ದು, ಒಂದೇ ವಾಹನ ಸಾಗುವಷ್ಟು ಜಾಗವಿದೆ. ಹೀಗಾಗಿ ಅಪಘಾತ ಸಂಭವಿಸಿದ ಬಳಿಕ ತಾಸಿಗೂ ಹೆಚ್ಚು ಹೊತ್ತು ಟ್ರಾಫಿಕ್‌ ಜಾಮ್‌ ಆಗಿ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಭಾರಿ ಮಳೆಯ ನಡುವೆ ಸ್ಥಳೀಯರು ಹಾಗೂ ಪೊಲೀಸ್‌ ಅಧಿಕಾರಿಗಳು ರಸ್ತೆ ತೆರವು ಮಾಡಿಕೊಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದೇ ಪರಿಸರದಲ್ಲಿ ಕಳೆದ ವಾರವಷ್ಟೇ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































error: Content is protected !!
Scroll to Top