ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ – ಬಾಲಕೃಷ್ಣ ಶೆಟ್ಟಿ
ಕಾರ್ಕಳ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಜೂ.15 ರಂದು ಬೀಜದುಂಡೆ ವಿತರಣೆ ಅಭಿಯಾನ ನಡೆಸಿದರು.
ಹಿರಿಯ ನ್ಯಾಯವಾದಿ ಹಾಗೂ ಕಾರ್ಕಳ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಲಸು, ಗೇರು, ಮಾವು, ಹೆಬ್ಬಲಸು ಮುಂತಾದ ಬೀಜಗಳನ್ನು ಬಳಸಿ ತಯಾರಿಸಿದ ಬೀಜದುಂಡೆಯನ್ನು ಕಾರ್ಕಳ ನಗರದ ಆಟೋರಿಕ್ಷಾ ಚಾಲಕರಿಗೆ ವಿತರಿಸಿದರು.
ಆಟೋರಿಕ್ಷಾ ಚಾಲಕ ಮಾಲಕರ ಜಿಲ್ಲಾ ಸಂಘದ ಕಾರ್ಯದರ್ಶಿ ಸಂತೋಷ್ ರಾವ್, ತಾಲೂಕು ಆಟೋ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಅಣ್ಣಿ ಮಡಿವಾಳ, ಗೈಡ್ ಶಿಕ್ಷಕಿ ಗಾಯತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಕಿರಣ್ ಕುಮಾರ್, ಕಲಾ ಶಿಕ್ಷಕ ಮನೋಜ್ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಆಪ್ತ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರುಷಿ ವಂದಿಸಿದರು.





































