ಬೇಡಿಕೆ – ದರ ಕುಸಿತದಿಂದಾಗಿ ತತ್ತರಿಸಿದ ಗೇರು ಫ್ಯಾಕ್ಟರಿಗಳು
ಸಾವಿರಾರು ಕಾರ್ಮಿಕರು ಅತಂತ್ರರಾಗುವ ಭೀತಿ
ಕಾರ್ಕಳ : ಗೇರು ಉದ್ಯಮ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಆರ್ಥಕತೆಯ ಜೀವನಾಡಿ. ಸಾವಿರಾರು ಕುಟುಂಬಗಳು ಈ ಉದ್ಯಮ ಎರಡೊತ್ತಿನ ತುತ್ತು ನೀಡುತ್ತಿದೆ. ಇದೀಗ ಗೇರು ಉದ್ಯಮಕ್ಕೆ ಎದುರಾಗಿರುವ ಸಂಕಷ್ಟ ಮಾಲಕರು ಮಾತ್ರವಲ್ಲದೆ ಕಾರ್ಮಿಕರಿಗೂ ನೆತ್ತಿಯ ಮೇಲೆ ತೂಗುವ ಅಪಾಯದ ಕತ್ತಿಯಂತಿದೆ.

ಗೋಡಂಬಿಗೆ ನಿರೀಕ್ಷಿತ ಬೇಡಿಕೆ ಇಲ್ಲದಿರುವುದು, ದರ ಕುಸಿತ, ವಿಯೆಟ್ನಾಂನಿಂದ ನಿಯಮ ಬಾಹಿರವಾಗಿ ಗೋಡಂಬಿ ಆಮದು ಕಾರಣದಿಂದಾಗಿ ಕರಾವಳಿ ಭಾಗದ ನೂರಾರು ಗೇರು ಫ್ಯಾಕ್ಟರಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಗೇರು ಉದ್ಯಮಿಗಳು ಅಧಿಕ ಬೆಲೆ ತೆತ್ತು ಕಚ್ಚಾ ಗೇರು ಖರೀದಿ ಮಾಡಿದ್ದು, ಇದೀಗ ಗೇರು ಬೀಜಕ್ಕೆ ಬೇಡಿಕೆ ಇಲ್ಲದ ಪರಿಣಾಮ ಮತ್ತು ದರ ಕುಸಿತದಿಂದಾಗಿ ಗೇರು ಉದ್ಯಮ ಭಾರಿ ತೊಂದರೆಯಲ್ಲಿದೆ.
ವರ್ಷಾರಂಭದ ಸಮಯ ಅಧಿಕ ಬೆಲೆ ತೆತ್ತು ಗೇರು ಫ್ಯಾಕ್ಟರಿ ಮಾಲಕರು ವಿದೇಶಗಳಿಂದ ಗೇರು ಆಮದು ಮಾಡಿಕೊಂಡಿದ್ದರು. ಉದಾಹರಣೆಗೆ 90 ಸಾವಿರ ಕೆ.ಜಿ. ಕಚ್ಚಾಗೇರುವನ್ನು 1 ಕೋಟಿ ರೂ. ನೀಡಿ ಖರೀದಿಸಿದ್ದರು. ಅದನ್ನು ಸಂಸ್ಕರಿಸಿ ವಾಪಸ್ ಮಾರಾಟ ಮಾಡುವಾಗ ಕೇವಲ 85 ಲಕ್ಷ ರೂ. ದೊರೆಯುತ್ತಿದೆ. ಉತ್ಪಾದನಾ ವೆಚ್ಚ, ಕಾರ್ಮಿಕರ ವೇತನ, ಕಚ್ಚಾಗೇರು ಖರೀದಿಗೆ ಮಾಡಿದ ಬ್ಯಾಂಕ್ ಸಾಲದ ಬಡ್ಡಿ ಭರಿಸಲು ಇದರಿಂದ ಸಾಧ್ಯವಾಗದೆ ಅನೇಕ ಗೇರು ಉದ್ಯಮಿಗಳು ದಿಕ್ಕುತೋಚದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಕೋವಿಡ್ ಹೊಡೆತ
2020ರಲ್ಲಿ ಕಾಡಿದ ಕೋವಿಡ್ ಗೇರು ಫ್ಯಾಕ್ಟರಿಗಳಿಗೆ ಬಹುವಾಗಿ ಹೊಡೆತ ನೀಡಿತ್ತು. ಆ ಬಳಿಕ ಇವತ್ತಿಗೂ ಗೇರು ಉದ್ಯಮ ಚೇತರಿಕೆ ಕಂಡಿಲ್ಲ. ಎಲ್ಲ ಗೇರು ಫ್ಯಾಕ್ಟರಿಗಳು ಕೂಡ ಹತ್ತಾರು ಕೋಟಿ ರೂ. ವ್ಯವಹಾರ ನಡೆಸುತ್ತಿವೆ. ಕಚ್ಚಾಗೇರು ಪಡೆಯಲು ಹತ್ತಾರು ಕೋಟಿ ರೂ. ಬ್ಯಾಂಕ್ ಸಾಲ ಪಡೆಯುತ್ತಿವೆ. ಒಂದು ಕಡೆ ಬ್ಯಾಂಕ್ ಸಾಲ ತೀರಿಸಲಾಗದೆ ಮತ್ತೊಂದು ಕಡೆ ಗೇರುವಿಗೆ ಬೇಡಿಕೆ ಇಲ್ಲದೆ ಗೇರು ಉದ್ಯಮಿಗಳು ಪರಿತಪಿಸುವಂತಾಗಿದೆ.
ಸಾಲ ಪುನರ್ರಚನೆ
ಸರಕಾರ ಕೊರೊನಾದ ಸಂಕಷ್ಟ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್ಗಳ ಮೂಲಕ ಜಿಇಸಿಎಲ್ (Guaranteed Emergency Credit Line)ನಂತೆ ಶೇ. 20 ರಷ್ಟು ಹೆಚ್ಚುವರಿ ಸಾಲ ಕಲ್ಪಿಸಿತ್ತು. ಅದರೊಂದಿಗೆ ಕೈಗಾರಿಕೆಯ ಬ್ಯಾಂಕ್ ಸಾಲವನ್ನು ಪುನರ್ರಚನೆ (restructure loan) ಸಾಲವಾಗಿ ಮಾರ್ಪಡಿಸಿತು. 2 ವರ್ಷಗಳ ಕಾಲ ಮರುಪಾವತಿಸಬೇಕಾಗಿಲ್ಲ ಎಂಬ ನಿಯಮ ಜಾರಿ ಮಾಡಿತು. ಆದರೆ ಈ ಹಿಂದೆ ಇದ್ದಂತೆ ಸಾಲದ ಅವಧಿ ಮಾತ್ರ 7 ವರ್ಷಕ್ಕೆ ಸೀಮಿತವಾಗಿತ್ತು. 2 ವರ್ಷಗಳ ಬಡ್ಡಿ, ಅಸಲು ಪಾವತಿಸದೆ ಮೌನವಾಗಿದ್ದ ಕೈಗಾರಿಕೋದ್ಯಮಿಗಳು 2 ವರ್ಷಗಳ ಅನಂತರ ಪ್ರತಿ ತಿಂಗಳು ಒಮ್ಮೆಲೆ ಜಿಇಸಿಎಲ್, ಪುನರ್ರಚನೆ ಮಾಡಿದ ಸಾಲದ ಬಡ್ಡಿ, ಅಸಲು ಪಾವತಿಸುವ ಅನಿವಾರ್ಯತೆ ಒದಗಿತು. ಇದರಿಂದ ಕೈಗಾರಿಕೋದ್ಯಮಿಗಳು ಕಂಗಾಲಾದರು.
ಸಂಕಷ್ಟದಲ್ಲಿ ಮಾಲಕರು – ಕಾರ್ಮಿಕರು
ಕರಾವಳಿಯಲ್ಲಿ ಸಣ್ಣ ಪ್ರಮಾಣದಿಂದ 2, 3 ಸಾವಿರ ಕೋಟಿ ರೂ. ವ್ಯವಹಾರ ನಡೆಸುವಂತಹ ಬಹುದೊಡ್ಡ ಗೇರು ಫ್ಯಾಕ್ಟರಿಗಳಿದೆ. ಅವುಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಗೇರು ಉದ್ಯಮ ನಷ್ಟದಲ್ಲಿ ಮುಂದುವರಿದಲ್ಲಿ ಮಾಲಿಕರು ಮಾತ್ರವಲ್ಲ ಕಾರ್ಮಿಕರಿಗೂ ಅದರಿಂದ ತೊಂದರೆಯಾಗುವುದು. ಶೇ. 90ರಷ್ಟು ಮಹಿಳೆಯರೇ ಗೇರು ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು, ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲೂ ಗೇರು ಫ್ಯಾಕ್ಟರಿಗಳು ಸಹಕಾರಿಯಾಗಿದೆ. ಕರಾವಳಿ ಭಾಗದಲ್ಲಿ ಬೀಡಿ, ಹಂಚು ತಯಾರಿ ಘಟಕ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಒದಗಿಸಿದ್ದು ಆ ಬಳಿಕ ಗೇರು ಫ್ಯಾಕ್ಟರಿಯೇ ಆ ಸಾಲಿನಲ್ಲಿ ನಿಲ್ಲುವುದು. ಅದು ಕೂಡ ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದು ಉದ್ಯೋಗಿಗಳಲ್ಲಿ ಆಂತಕವುಂಟು ಮಾಡಿದೆ. ಕೆಲವೊಂದು ಫ್ಯಾಕ್ಟರಿಗಳನ್ನು ನಡೆಸಲು ಸಾಧ್ಯವಾಗದೆ ಮುಚ್ಚಿರುವ ನಿದರ್ಶನವಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಾರ್ಕಳದ ಗೇರು ಉದ್ಯಮಿಯೋರ್ವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಬಹುತೇಕ ಗೇರು ಫ್ಯಾಕ್ಟರಿಗಳನ್ನು ಬ್ಯಾಂಕ್ಗಳು ಎನ್ಪಿಎ (Non-performing Assets) ಎಂದು ಗುರುತಿಸಿದೆ. ಹೀಗಾಗಿ ಕರಾವಳಿ ಭಾಗದ ಮತ್ತಷ್ಟು ಗೇರು ಕಾರ್ಖಾನೆ ಮುಚ್ಚುವ ಭೀತಿಯಲ್ಲಿದೆ.
ಆಫ್ರಿಕಾ ದೇಶಗಳಿಂದ ಆಮದು
ಆಫ್ರಿಕ ದೇಶಗಳಿಂದ ಕಚ್ಚಾಗೇರುವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಬೆನಿನ್, ಐವೊರಿಕಾಸ್ಟ್ (ಐವಿಸಿ), ಗಿನ್ನಿಬಿಸವೋ, ಗಿನ್ನಿಕೊನಾಕ್ರಿ, ಸೆನೆಗಲ್, ತಾಂಜಾನೀಯಾ, ಟೋಗೋ ಮೊದಲಾದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ, ಯುಎಇ, ರಷ್ಯಾ, ಜಪಾನ್, ಆಸ್ಟ್ರೇಲಿಯ, ಗಲ್ಫ್, ಯೂರೋಪ್ ರಾಷ್ಟ್ರಗಳಿಗೆ ಸಂಸ್ಕರಿಸಿದ ಗೇರು ರಫ್ತು ಮಾಡಲಾಗುತ್ತಿದೆ.
ಉಡುಪಿ, ದ.ಕ., ಉತ್ತರ ಕನ್ನಡದ ಗೇರು ಫ್ಯಾಕ್ಟರಿಗಳು ವಾರ್ಷಿಕ 7 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಗೇರು ಆಮದು ಮಾಡಿಕೊಳ್ಳುತ್ತಿದೆ. ಕರಾವಳಿಯ ಮೂರು ಜಿಲ್ಲೆಯ ಗೇರು ಫ್ಯಾಕ್ಟರಿಗಳಿಂದ ವಾರ್ಷಿಕ 330 ಕೋಟಿ ರೂ. ಜೆಎಸ್ಟಿ ಸಂಗ್ರಹವಾಗುತ್ತಿದೆ. 450 ಕೋಟಿ ರೂ. ಕಾರ್ಮಿಕ ವೇತನ, ಇತರ ಸೌಲಭ್ಯ ನೀಡಲಾಗುತ್ತಿದೆ. 2 ಸಾವಿರ ಕೋಟಿ ರೂ. ಬ್ಯಾಂಕ್ ವ್ಯವಹಾರ ನಡೆಯುತ್ತಿದೆ. ಪ್ಯಾಕಿಂಗ್ ಸಾಮಗ್ರಿಗಳು, ಕ್ಲಿಯರಿಂಗ್ ಏಜೆಂಟ್ಗಳು, ಟ್ರಕ್ ಮತ್ತು ಟ್ರಕ್ಕಿಂಗ್ ಕಂಪನಿಗಳು, ಮಷಿನರಿ ಪೂರೈಕೆದಾರರು ಮತ್ತು ನಿರ್ವಹಣೆ ಹೀಗೆ ವಾರ್ಷಿಕ 700 ಕೋಟಿ ರೂ. ಭರಿಸಲಾಗುತ್ತಿದೆ.
ವಾರ್ಷಿಕ 5 ಸಾವಿರ ಕೋಟಿ ರೂ. ವ್ಯವಹಾರ
ಕರಾವಳಿಯಲ್ಲಿ ಒಟ್ಟು 350 ಗೇರು ಫ್ಯಾಕ್ಟರಿಗಳಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಈ ಫ್ಯಾಕ್ಟರಿಗಳಿಂದ ಉದ್ಯೋಗ ದೊರೆತಿದೆ. ವಾರ್ಷಿಕ 5 ಸಾವಿರ ಕೋಟಿ ರೂ. ವ್ಯವಹಾರ ಗೇರು ಉದ್ಯಮದಿಂದಾಗುತ್ತಿದೆ. ವಿದೇಶಗಳಿಗೆ ಶೇ. 20ರಷ್ಟು ಪ್ರಮಾಣದಲ್ಲಿ ಕರಾವಳಿಯಿಂದ ಗೋಡಂಬಿ ರಫ್ತಾಗುತ್ತಿದೆ. ಮಹಿಳೆಯರೇ ಗೇರು ಫ್ಯಾಕ್ಟರಿಯಲ್ಲಿ ಹೆಚ್ಚಾಗಿ ದುಡಿಯುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ, ಸ್ವಾವಲಂಬಿ ಜೀವನ ಸಾಗಿಸುವಲ್ಲಿ ಈ ಉದ್ಯಮದ ಪಾತ್ರ ಹಿರಿದಾದುದು.
ಜನಪ್ರತಿನಿಧಿಗಳಿಗೆ ಮನವಿ
ಗೇರು ಫ್ಯಾಕ್ಟರಿಗಳ ರಕ್ಷಣೆಗೆ ಸರಕಾರ ಮುಂದಾಗುವಂತೆ ಗೇರು ಉದ್ಯಮಿಗಳು ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ವಿದ್ಯುತ್ ಬಿಲ್ ಏರಿಕೆ – ಗಾಯದ ಮೇಲೆ ಬರೆ
ಜೂನ್ ತಿಂಗಳಿನ ವಿದ್ಯುತ್ ಬಿಲ್ ಕೂಡ ವಿಪರೀತವಾಗಿ ಏರಿದೆ. ಕೆಲವರಿಗೆ ಬಿಲ್ ಮೊತ್ತ ದ್ವಿಗುಣವಾಗಿದ್ದು ಗೇರು ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯವಾಗಿ 1 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತಿದ್ದ ಫ್ಯಾಕ್ಟರಿಗಳಿಗೆ ಈ ತಿಂಗಳು ಒಂದೂವರೆ ಲಕ್ಷ ರೂ. ಬಂದಿದೆ. ಹೀಗಾಗಿ ಉದ್ಯಮ ನಡೆಸುವುದಾದರೂ ಹೇಗೆ ಎಂಬ ಚಿಂತೆ ಉದ್ಯಮಿಗಳದ್ದು.
ಕರಾವಳಿ ಜಿಲ್ಲೆಗಳಲ್ಲಿ 350ಕ್ಕೂ ಅಧಿಕ ಗೇರು ಕಾರ್ಖಾನೆಗಳಿದೆ. ಹೀಗಾಗಿ ಆರ್ಥಿಕ ವಲಯಕ್ಕೂ ಗೇರು ಫ್ಯಾಕ್ಟರಿಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ಸಾವಿರಾರು ಮಂದಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿರುವ ಗೇರು ಫ್ಯಾಕ್ಟರಿಗಳು ಪ್ರಸ್ತುತ ತೊಂದರೆಯಲ್ಲಿದ್ದು ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಗೇರು ಫ್ಯಾಕ್ಟರಿಗಳ ರಕ್ಷಣೆಗೆ ಮುಂದಾಗಬೇಕಿದೆ.
– ದಿನೇಶ್ ಪೈ ಮುನಿಯಾಲು
ಗೇರು ಉದ್ಯಮಿ
2016ರಿಂದ ಇಂದಿನವರೆಗೂ ಗೇರು ಉದ್ಯಮ ನಷ್ಟದಲ್ಲಿದೆ. ಒಂದು ಕೆ.ಜಿ. ಕಚ್ಚಾಗೇರು ದರ 120 ರೂ.ನಿಂದ ಇದೀಗ 80 ರೂ. ಕುಸಿದಿದೆ. ವಿದೇಶದಿಂದ ಸಂಸ್ಕರಿಸಿದ ಗೋಡಂಬಿಯೇ ಕಡಿಮೆ ಬೆಲೆಗೆ ಅಕ್ರಮವಾಗಿ ಭಾರತಕ್ಕೆ ಯಥೇಚ್ಛವಾಗಿ ಬರುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಬಹುತೇಕ ಕ್ಯಾಶ್ಯೂ ಫ್ಯಾಕ್ಟರಿಗಳು ಸದ್ಯದಲ್ಲೇ ಮುಚ್ಚುವ ದುಸ್ಥಿತಿ ಬರಲಿದೆ.
– ಟಿ. ಹರೀಂದ್ರ ಪೈ
ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ಬಂಟ್ವಾಳ






























































