ಹುಬ್ಬಳ್ಳಿಯಿಂದ ಪುತ್ತೂರಿಗೆ ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆ
ಮಂಗಳೂರು: ಸರ್ಕಾರದ ಶಕ್ತಿ ಯೋಜನೆಯನ್ನು ಬಳಸಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಉಚಿತ ಬಸ್ ಮೂಲಕ ಬಂದ ವಿವಾಹಿತ ಮಹಿಳೆ ಪ್ರಿಯಕರನ ಜತೆ ಪರಾರಿಯಾದ ಘಟನೆ ನಡೆದಿದೆ.
ಹನ್ನೊಂದು ತಿಂಗಳ ಮಗು ಹೊಂದಿರುವ ಹುಬ್ಬಳ್ಳಿಯ ಮಹಿಳೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ನೆಪದಲ್ಲಿ ಮನೆಯಿಂದ ಹೊರಟಿದ್ದಾಳೆ. ಬಳಿಕ ಆಧಾರ್ ಕಾರ್ಡ್ ಬಳಸಿ ಉಚಿತ ಬಸ್ ಮೂಲಕ ಹುಬ್ಬಳ್ಳಿಯಿಂದ ಪುತ್ತೂರಿಗೆ ಆಗಮಿಸಿದ್ದಾಳೆ.
ಆಕೆಯ ಪ್ರಿಯಕರ ಪುತ್ತೂರಿನ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ಮಹಿಳೆ ಮದುವೆಗೆ ಮುನ್ನ ಯುವಕನ ಪ್ರೀತಿಗೆ ಬಿದ್ದಿದ್ದಳು. ಮದುವೆ ಆದ ಬಳಿಕವೂ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು.
ತವರು ಮನೆಯಲ್ಲಿದ್ದ ಅವಳನ್ನು ಒಂದು ರೀತಿ ಗೃಹಬಂಧನದಲ್ಲಿ ಇಡಲಾಗಿತ್ತು. ಅವಳ ಕೈಗೆ ಹಣ, ಮೊಬೈಲ್ ಸಿಗದಂತೆ ಮನೆಯವರು ನೋಡಿಕೊಂಡಿದ್ದರು. ಆದರೆ ಮಂಗಳವಾರ ಅದೇಗೋ ಮೊಬೈಲ್ ಸಂಪಾದಿಸಿ ಆಕೆ ಪ್ರಿಯಕರನಿಗೆ ಫೋನ್ ಮಾಡಿದ್ದಾಳೆ. ಆಗ ಆತ ಹೇಗಾದರೂ ಮಾಡಿ ಪುತ್ತೂರಿಗೆ ಬರಲು ಹೇಳಿದ್ದಾನೆ. ಮಹಿಳೆ ತನ್ನ ಬಳಿ ಚಿಕ್ಕಾಸು ಇಲ್ಲ ಎಂದಾಗ ಹೇಗಾದರೂ ಮಾಡಿ ಹುಬ್ಬಳ್ಳಿ ಬಸ್ ನಿಲ್ದಾಣಕ್ಕೆ ಹೋಗು. ಅಲ್ಲಿಂದ ಪುತ್ತೂರಿಗೆ ಸರಕಾರಿ ಬಸ್ ಇದೆ. ಈಗ ಮಹಿಳೆಯರಿಗೆ ಉಚಿತ ಪ್ರಯಾಣ. ಆಧಾರ್ ಇದ್ದರೆ ಸಾಕು ಎಂದು ಐಡಿಯಾ ಕೊಟ್ಟಿದ್ದಾನೆ. ಅದರಂತೆ ಮಹಿಳೆ 11 ತಿಂಗಳ ಹಸುಗೂಸನ್ನು ಮನೆಯಲ್ಲೇ ಬಿಟ್ಟು ಆಧಾರ್ ತಿದ್ದುಪಡಿ ಮಾಡುವ ನೆಪ ಹೇಳಿ ಮನೆಯಿಂದ ಹೊರಬಿದ್ದು ಪುತ್ತೂರಿನ ಬಸ್ ಏರಿದ್ದಾಳೆ.
ಮಹಿಳೆ ಪುತ್ತೂರಿಗೆ ಬಂದಿರುವುದು ತಿಳಿದು ಹುಬ್ಬಳ್ಳಿಯಿಂದ ಪುತ್ತೂರಿಗೆ ಗಂಡನ ಮನೆಯವರು ಹಾಗೂ ಮಹಿಳೆಯ ಮನೆಯವರು ಆಗಮಿಸಿ ರಾತ್ರಿಯಿಡೀ ಪುತ್ತೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಕಂಗಾಲಾದ ಕುಟುಂಬಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯ ಪ್ರಕಾಶ್ ಬದಿನಾರ್ ನೆರವಾಗಿದ್ದಾರೆ. ಪುತ್ತೂರಿಗೆ ಬಂದು ಪ್ರಿಯಕರನ ಜತೆ ಪರಾರಿಯಾದ ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಯಪ್ರಕಾಶ್, ಪೊಲೀಸರಿಗೆ ದೂರು ನೀಡಿ ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಇಬ್ಬರೂ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಲಭ್ಯವಾಗಿದೆ. ಪೊಲೀಸರು ಅವರಿಬ್ಬರನ್ನು ಹುಡುಕುತ್ತಿದ್ದಾರೆ.


























