ಸುಳಿವು ಸಿಗದಂತೆ ನೋಡಿಕೊಂಡಿದ್ದ ಚಾಲಾಕಿ ಚಾಲಕ
ಕಾರ್ಕಳ : ಮಂಜರಪಲ್ಕೆ ಸಮೀಪ ಕೆದಿಂಜೆಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದ ಲಾರಿ ಹಾಗೂ ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಕುಂದಾಪುರದ ಬಿ.ಸಿ ರೋಡ್ ನಿವಾಸಿ ಲಾರಿ ಮಾಲಕ/ಚಾಲಕ ಸುರೇಶ್ ಶೆಟ್ಟಿ ಅಪಘಾತವೆಸಗಿದ್ದ ವ್ಯಕ್ತಿ. ಲಾರಿಯನ್ನು ಈತ ಗ್ಯಾರೇಜ್‌ನಲ್ಲಿಟ್ಟು ಏನು ತಿಳಿಯದಂತೆ ವರ್ತಿಸಿದ್ದ.
ಘಟನೆ ವಿವರ
ಮೇ 25ರಂದು ಪಡುಬಿದ್ರಿ – ಕಾರ್ಕಳ ಹೆದ್ದಾರಿಯಲ್ಲಿ ಮಂಜರಪಲ್ಕೆ ಸಮೀಪ ಕೆದಿಂಜೆ ಬಿ.ಎಸ್.ಕೆ. ಕ್ಯಾಶ್ಯೂ ಫ್ಯಾಕ್ಟರಿ ಬಳಿ ಪಾದಚಾರಿಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದರು. ಅಂದು ರಾತ್ರಿ ಸುಮಾರು 8. 40ರ ಹೊತ್ತಿಗೆ ಮೂಲತಃ ಒಡಿಶಾದವರಾದ ಲಕ್ಷ್ಮಣ್ ಮುರ್ಮು, ಘನಶ್ಯಾಮ್ ಮುರ್ಮು ಮತ್ತು ಕರಣ್ ಮುರ್ಮು ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಗೆ ವೇಗವಾಗಿ ಸಾಗುತ್ತಿದ್ದ ವಾಹನ ಘನಶ್ಯಾಮ್ ಮತ್ತು ಕರಣ್‌ಗೆ ಡಿಕ್ಕಿ ಹೊಡೆದಿದೆ. ಘನಶ್ಯಾಮ್ ಮತ್ತು ಕರಣ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಘನಶ್ಯಾಮ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಆತ ದಾರಿ ಮಧ್ಯೆ ಮೃತಪಟ್ಟಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪಘಾತವೆಸಗಿದ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದು ಆತನ ಪತ್ತೆ ಹಚ್ಚುವಲ್ಲಿ ಪೊಲೀಸರು ಇದೀಗ ಯಶ ಕಂಡಿದ್ದಾರೆ.

ಜಾಡು ಹಿಡಿದ ಪೊಲೀಸರು
ಡಿಕ್ಕಿ ಹೊಡೆದು ಪಲಾಯನಗೈದ ವಾಹನದ ಪತ್ತೆಗಾಗಿ ಕಾರ್ಕಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ಮತ್ತವರ ತಂಡ ಎಲ್ಲ ಆಯಾಮದಿಂದಲೂ ಶ್ರಮಿಸಿತ್ತು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಸಾರ್ವಜನಿಕರ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಪ್ರಶಾಂತ್ ಹಾಗೂ ಗಿರೀಶ್ ಅವರು ಈ ನಿಟ್ಟಿನಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ.
ಸುಳಿವು ಸಿಗದಂತೆ ನೋಡಿಕೊಂಡಿದ್ದ ಚಾಲಾಕಿ ಚಾಲಕ
ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸುರೇಶ್ ಶೆಟ್ಟಿ ಲಾರಿಯನ್ನು ಅಡ್ಡದಾರಿಯಲ್ಲಿ ನಿಲ್ಲಿಸಿ ಯಾರಿಗೂ ತನ್ನ ಮೇಲೆ ಸುಳಿವು ಸಿಗದಂತೆ ನೋಡಿಕೊಂಡಿದ್ದ. ಬಳಿಕ ಕುಂದಾಪುರದ ಗ್ಯಾರೇಜ್ ಒಂದರಲ್ಲಿ ಲಾರಿಯನ್ನು ಸರ್ವಿಸ್‌ಗೆ ಇಟ್ಟಿದ್ದ. ಈ ಮೂಲಕ ತನ್ನ ಮೇಲೆ ಪೊಲೀಸರಿಗೆ ಅನುಮಾನ ಬರದಂತೆ ಎಚ್ಚರಿಕೆ ವಹಿಸಿದ್ದ.
ಅಪಘಾತವು ಸ್ವಾಭಾವಿಕವಾಗಿ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯತೆಯಿಂದ ಆಗುವಂತದು. ಅದರಲ್ಲಿ ಕ್ರಿಮಿನಲ್ ಉದ್ದೇಶವಿರುವುದಿಲ್ಲ. ಚಾಲಕ ಪರಾರಿಗೆ ಯತ್ನಿಸಿದಲ್ಲಿ ಅದು ಐ.ಎಂ.ವಿ ಕಾಯ್ದೆ (ಭಾರತೀಯ ಮೋಟಾರು ಕಾಯ್ದೆ 134 (ಎ) ಮತ್ತು 134 (ಬಿ)ಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. 134 (ಎ) ನಿಯಮದಂತೆ ಅಪಘಾತ ನಡೆದಲ್ಲಿ ಗಾಯಾಳನ್ನು ಉಪಚರಿಸಬೇಕು ಮತ್ತು ಕೂಡಲೇ ಪ್ರಥಮ ಚಿಕಿತ್ಸೆ ಕೊಡಿಸಬೇಕು. 134 (ಬಿ) ನಿಯಮದಂತೆ ಅಪಘಾತದ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಇದೆ. ಇದನ್ನು ಪಾಲನೆ ಮಾಡದಿದ್ದಲ್ಲಿ ಹಿಟ್ ಆ್ಯಂಡ್ ರನ್ ಆಗುವುದು. ಇದೊಂದು ಜಾಮೀನು ದೊರೆಯುವ ಪ್ರಕರಣವಾಗಿದ್ದು ಅಪಘಾತವಾದ ಕೂಡಲೇ ಪರಾರಿಯಾಗದೇ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಗೋಲ್ಡನ್ ಅವರ್ ನಲ್ಲಿ ದಾಖಲಿಸಿ ಅಮೂಲ್ಯ ಜೀವ ಉಳಿಸುವ ಕಾರ್ಯವನ್ನು ಎಲ್ಲ ಚಾಲಕರು ಮತ್ತು ಸಾರ್ವಜನಿಕರು ಮಾಡಬೇಕು.
ನಾಗರಾಜ್ ಟಿ.ಡಿ.
ವೃತ್ತ ನಿರೀಕ್ಷಕರು, ಕಾರ್ಕಳ






















