ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಜೂ. 6 ರಿಂದ 3 ದಿನಗಳ ಕಾಲ ನಡೆದ ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆ ಜೂ.8ರಂದು ಮುಕ್ತಾಯಗೊಂಡ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು.
ಹಣದುಬ್ಬರ ಕಡಿಮೆ ಆಗಿರುವುದರಿಂದ ಈ ಬಾರಿ ಬಡ್ಡಿ ದರ ಏರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ರೆಪೋ ದರ ಮಾತ್ರವಲ್ಲ ರಿವರ್ಸ್ ರಿಪೋ ಮತ್ತಿತರ ದರಗಳಲ್ಲೂ ಬದಲಾವಣೆಗಳಾಗಿಲ್ಲ. ಹಣದುಬ್ಬರ ಇಳಿಕೆಯಾದರೂ ಸಮಾಧಾನಪಡುವಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದೂ ಎಚ್ಚರಿಸಿದ್ದಾರೆ. ಹೆಡ್ಲೈನ್ ಹಣದುಬ್ಬರವು ಕಡಿಮೆ ಆಗಿದ್ದರೂ ಅದು ನಮ್ಮ ಗುರಿಗಿಂತ ಮೇಲ್ಮಟ್ಟದಲ್ಲೇ ಇದೆ. ಈ ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡುವುದು ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿ ಎಂಪಿಸಿಯ 6 ಸದಸ್ಯರು 3 ದಿನಗಳ ಕಾಲ ನಡೆಸಿದ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡರೆನ್ನಲಾಗಿದೆ. ಕಳೆದ ಮೇ ತಿಂಗಳಿಂದೀಚೆ ರೆಪೋ ದರವನ್ನು ಸತತವಾಗಿ ಏರಿಸುತ್ತಾ ಬರಲಾಗಿದೆ. ಈ ಅವಧಿಯಲ್ಲಿ 250 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಮಾಡಲಾಗಿದೆ. ಶೇ. 7ಕ್ಕಿಂತ ಹೆಚ್ಚು ಇದ್ದ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಶೇ. 4.7ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರೆಪೋ ದರದ ಏರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

























