ಕಗ್ಗದ ಸಂದೇಶ-ಆತ್ಮಕ್ಕೆ ಬೇಕು ಚಿಂತೆಯ ಚಿಕಿತ್ಸೆ…

ಚಿಂತೆ ಸಂತಾಪಗಳು ಮನಸಿಗೆ ವಿರೇಚಕವೋ|
ಸಂತಷೋತ್ಸಾಹಗಳೆ ಪಥ್ಯದುಪಚಾರ||
ಇಂತುಂಮಂತುಂ ನಡೆಯುತ್ತಿರುವುದಾತ್ಮ ಚಿಕಿತ್ಸೆ|
ಎಂತಾದೊಡಂತೆ ಸರಿ–ಮಂಕುತಿಮ್ಮ||

    ಚಿಂತೆ ಮತ್ತು ಸಂಕಟಗಳು ನಮ್ಮಮನಸ್ಸಿನಲ್ಲಿ ತುಂಬಿಕೊಂಡಿರುವ ಕೊಳೆಯನ್ನು ತೆಗೆದು ಶುದ್ಧ ಮಾಡುತ್ತವೆ. ಸಂತೋಷ ಮತ್ತು ಉತ್ಸಾಹಗಳು ಮನಸ್ಸಿನ ಅನಾರೋಗ್ಯವನ್ನು ನಿವಾರಿಸುವ ಪಥ್ಯದ ಉಪಚಾರದಂತೆ ಕಾರ್ಯ ನಿರ್ವಹಿಸುತ್ತವೆ. ಹೀಗೆಯೋ ಹಾಗೆಯೋ ನಿರಂತರವಾಗಿ ಆತ್ಮದ ಚಿಕಿತ್ಸೆ ನಡೆಯುತ್ತಿರುತ್ತದೆ  ಎಂದು ಮಾನ್ಯ ಡಿವಿಜಿ ಈ ಮುಕ್ತಕದಲ್ಲಿ ಹೇಳಿದ್ದಾರೆ.
    ಆರ್ಯುವೇದದ ಪಂಚಕರ್ಮದಲ್ಲಿ ಬರುವ ಐದು ಶುದ್ಧೀಕರಣ ಪ್ರಕ್ರಿಯೆಗಳಲ್ಲಿ ಒಂದಾಗಿರುವ ವಿರೇಚನವೂ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ದೇಹವನ್ನು ಶುದ್ಧ ಮಾಡುತ್ತದೆ. ಇಲ್ಲಿ ಡಿವಿಜಿಯವರು ಚಿಂತೆ ಮತ್ತು ಸಂತಾಪಗಳು ನಮ್ಮ ದೇಹಕ್ಕೆ ಈ ವಿರೇಚನ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತವೆ ಎಂದಿದ್ದಾರೆ."ಚಿತೆ ಸತ್ತವನನ್ನು ಸುಟ್ಟರೆ ಚಿಂತೆ ಜೀವಂತ ಇರುವವರನ್ನು ಸುಡುತ್ತದೆ" ಎಂಬ ಮಾತು ಸರಿಯಲ್ಲ, ಚಿಂತೆ ಸುಡುವ ಅಲ್ಲ ನಮ್ಮ ಮನಸ್ಥಿತಿಯನ್ನು ಸುಧಾರಿಸುವ ಕೆಲಸನ್ನೂ ಮಾಡುತ್ತದೆ. ಅದಕ್ಕೆ ಪ್ರಾಜ್ಞರು  ಕಷ್ಟವನ್ನು ಅನುಭವಿಸದೆ ಸುಖವಿಲ್ಲ" ಎಂದಿದ್ದಾರೆ.
   'ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ' ಅಂದರೆ ಚಿಂತೆ ಇಲ್ಲದಿದ್ದರೆ ಸೋಮಾರಿತನ ಬರುತ್ತದೆ. ಚಿಂತೆ ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಮಾಡುತ್ತದೆ. ನಿದ್ದೆ ಎನ್ನುವುದು ಸುಖದ ಮಾತ್ರವಲ್ಲ ಅಲಸ್ಯವನ್ನೂ ಸೂಚಿಸುತ್ತದೆ. 'ಸಂಕಟಗಳು ಸಂಕಷ್ಟ ಅಲ್ಲ ಸಂತೋಷವನ್ನೂ ತರುತ್ತವೆ.' ಸಂಕಟ ಬಂದಾಗ ವೆಂಕಟರಮಣ' ಎನ್ನುವ ಹಾಗೆ ದುಃಖ ಉಂಟಾದಾಗ ಮನಸಾರೆ ದೇವರನ್ನು ನೆನೆಯುತ್ತೇವೆ. ಆ ಮೂಲಕ ಬೇಡದ ವಿಚಾರಗಳಿಂದ ಮನಸ್ಸು ಮುಕ್ತವಾಗಿರುತ್ತದೆ. ಹೀಗೆ ಚಿಂತೆ ಮತ್ತು ಸಂತಾಪಗಳು ನಮ್ಮ ಮನಸ್ಸನ್ನು ಶುದ್ಧಗೊಳಿಸಿ ಗಟ್ಟಿಗೊಳಿಸುತ್ತವೆ.

‌‌‌

ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು ಹೇಳುವ ಪಥ್ಯವನ್ನು ಅನುಸರಿಸಿದಾಗಲೇ ಆರೋಗ್ಯ ಸುಧಾರಿಸುವುದು. ಚಿಂತೆ ಮತ್ತು ಸಂತಾಪಗಳು ನಮ್ಮ ದೇಹ ಮತ್ತು ಮನಸ್ಸಿಗೆ ಒದಗುವ ಚಿಕಿತ್ಸೆಯಾದರೆ ಸಂತೋಷ ಮತ್ತು ಉತ್ಸಾಹಗಳು ಪಥ್ಯದ ಉಪಚಾರಗುತ್ತದೆ. ಮನಸ್ಸು ಮತ್ತು ದೇಹ ಅರೋಗ್ಯವನ್ನು ಹೊಂದಿದಾಗಲೇ ಆತ್ಮದ ಉದ್ಧಾರಕ್ಕೆ ದಾರಿಯಾಗುವುದು. ಹೀಗೆ ಸಹಜವಾಗಿ ಆತ್ಮದ ಚಿಕಿತ್ಸೆ ಮತ್ತು‌ ಉಪಚಾರ ನಿರಂತರವಾಗಿ ನಡೆಯುತ್ತಿರುವುದರಿಂದಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ಘಟಕ ಅಧ್ಯಕ್ಷರು









































































































error: Content is protected !!
Scroll to Top