ಕಾರ್ಕಳದಲ್ಲಿ ಬಿಜೆಪಿ ಹರ್ಷೋದ್ಗಾರ

ಈ ಬಾರಿಯ ಚುನಾವಣೆ ರಾಜಕಾರಣ ಮಾಡಲು ಕಲಿಸಿದೆ – ಸುನಿಲ್‌ ಕುಮಾರ್‌

ಪಕ್ಷೇತರ ಅಭ್ಯರ್ಥಿಯನ್ನು ಡಮಾರ್‌ ಮಾಡಿಬಿಟ್ಟರು – ಮಣಿರಾಜ್‌ ಶೆಟ್ಟಿ

ಕಾರ್ಕಳ : ಇಲ್ಲಿವರೆಗೆ ತಾನು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದವನು. ಆದರೆ, ಇನ್ನು ಮುಂದೆ ಕ್ಷೇತ್ರದ ಅಭಿವೃದ್ದಿಯೊಂದಿಗೆ ರಾಜಕಾರಣವನ್ನು ಮಾಡಬೇಕಿದೆ. ಅದನ್ನು ಈ ಚುನಾವಣೆ ರೂಪಿಸಿಕೊಟ್ಟಿದೆ ಎಂದು ಸುನಿಲ್‌ ಕುಮಾರ್‌ ಅವರು ಎದುರಾಳಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.
ಅವರು ಮೆ 14ರಂದು ಬಂಡಿಮಠದಲ್ಲಿ ಕಾರ್ಯಕರ್ತರಿಗೆ ಮತದಾರರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೈಜ ಹಿಂದುತ್ವ ಎಂಬ ಮುಖವಾಡದೊಂದಿಗೆ ಬಂದಿರುವ ಪ್ರಮೋದ್ ಮುತಾಲಿಕ್ ಓರ್ವ ಡೀಲ್‌ ಮಾಸ್ಟರ್‌. ದುಡ್ಡು ಕೊಟ್ಟರೆ ಏನು ಮಾಡಲು ಸಿದ್ಧರಿರುವ ಮುತಾಲಿಕ್‌ ಟೈಗರ್‌ ಗ್ಯಾಂಗ್‌ ಹೆಸರಲ್ಲಿ ಹಿಂದೂಗಳ ಹತ್ಯೆಗೆ ಕಾರಣರಾದವರು ಎಂದು ಗಂಭೀರ ಆರೋಪ ಮಾಡಿದ ಸುನಿಲ್‌ ಕುಮಾರ್‌ ಈ ಹಿಂದೆ ಪ್ರಹ್ಲಾದ್‌ ಜೋಷಿ, ಅನಂತ ಕುಮಾರ್‌ ವಿರುದ್ಧ ಮುತಾಲಿಕ್ ಸ್ಪರ್ಧಿಸಿದ್ದರು.‌ ಈ ಬಾರಿ ಕಾರ್ಕಳದಲ್ಲಿ ಸ್ಪರ್ಧಿಸಿರುವ ಮುತಾಲಿಕ್‌ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಲು ಡೀಲ್‌ ಮಾಡುವಿರಿ ಎಂದು ಸುನಿಲ್‌ ಪ್ರಶ್ನಿಸಿದರು.

ಚಿಲ್ಲರೆ ವ್ಯಕ್ತಿಗೆ ಪ್ರತಿಕ್ರಿಯಿಸಲ್ಲ
ಚಿಕ್ಕನಿಂದಲೇ ಹೋರಾಟ ಮಾಡಿಕೊಂಡು ಬಂದ ನಾನು 2004ರಿಂದ ರಾಜಕೀಯದಲ್ಲಿದ್ದೇನೆ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವನಲ್ಲ. ಅಪಪ್ರಚಾರ ನಡೆಯುತ್ತಿದ್ದರೂ ಮೌನವಾಗಿದ್ದೆ. ಸಜ್ಜನಿಕೆ, ಸಭ್ಯತೆಯಿಂದ ಇರಬೇಕೆಂದು ಸುಮ್ಮನಾಗಿದ್ದೆ. ನಾವೇನು ಕೈಗೆ ಬಳೆಯನ್ನು ಹಾಕಿಕೊಂಡಿಲ್ಲ. ಪುರಸಭೆಯ ಲೈಸನ್ಸ್‌ಗೆ 200 ರೂ., 500 ರೂ. ಗೆ ಕೈಯೊಡ್ಡುವ ಚಿಲ್ಲರೆ ವ್ಯಕ್ತಿಗೆ ನಾನು ಪ್ರತಿಕ್ರಿಯಿಸಲ್ಲ. ನಾಲ್ಕು ಬಾರಿ ಆಯ್ಕೆಯಾದ ವ್ಯಕ್ತಿ ಮಾತನಾಡಬೇಕಾ ? ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕಾರ್ಕಳದ ಅಭಿವೃದ್ದಿಗಾಗಿ ಶಕ್ತಿಮೀರಿ ಶ್ರಮಿಸಿದ್ದೇನೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಆಗಲಿ ಕ್ಷೇತ್ರದ ಮತದಾರರಾಗಲಿ ಚರ್ಚಿಸದೆ, ಅನಗತ್ಯ ವಿಷಯಗಳ ಕುರಿತು ಚರ್ಚಿಸಿದರು ಎಂದು ಸುನಿಲ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಸಮಾಜ ವಿರೋಧಿ ಚಟುವಟಿಕೆ
ಕಾಂಗ್ರೆಸ್‌ಗೆ ಬಹುಮತ ದೊರೆತ ಕೂಡಲೇ ಸಮಾಜ ವಿರೋಧಿ ಚಟುವಟಿಕೆಗಳು ಗರಿಗೆದರಿದೆ. ಈ ಕುರಿತು ನಾವು ಎಚ್ಚೆತ್ತುಕೊಳ್ಳಬೇಕು. ನಿಮ್ಮ ಬೆಂಬಲದಿಂದ ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿದ್ದು ಧ್ವನಿ ಎತ್ತುತ್ತೇನೆ ಎಂದರು.

ಕಾಂಗ್ರೆಸ್ ಧೂಳಿಪಟ
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಈ ಬಾರಿಯ ಚುನಾವಣೆ ಸವಾಲಿನಿಂದ ಕೂಡಿತ್ತು. ಕಾಂಗ್ರೇಸ್ ನ ಎ ಮತ್ತು ಬಿ ಟೀಮ್ ಕಾರ್ಕಳದ ವಾತಾವರಣವನ್ನು ಕೆಡಿಸಿತ್ತು. ಹಣ, ಹೆಂಡ, ಏಕವಚನದ ಪ್ರಯೋಗ, ಸುನಿಲ್ ಕುಮಾರ್ ಅವರ ತೇಜೋವಧೆ, ಮಾಧ್ಯಮದ ಮೂಲಕ ಅಪಪ್ರಚಾರ ಮಾಡಿದ ಕಾಂಗ್ರೆಸ್ ಕಾರ್ಕಳದಲಿ ಧೂಳಿಪಟವಾಗಿದೆ ಎಂದರು.

ಡಮಾರ್‌ ಮಾಡಿಬಿಟ್ಟರು
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ಇಂದಿನ ವಿಜಯೋತ್ಸವ ಸಂಪೂರ್ಣವಾಗಿ ಕಾರ್ಯಕರ್ತರಿಗೆ ಸಲ್ಲುತ್ತದೆ. ಪ್ರತಿ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ನ ವಿರುದ್ಧ ಹೋರಾಟ ಮಾಡುತ್ತಿದ್ದೆವು, ಆದರೆ ಈ ಬಾರಿ ಕಾಂಗ್ರಸ್ ನ ಎ ಮತ್ತು ಬಿ ಟೀಮ್ ಗಳನ್ನು ಎದುರಿಸಬೇಕಾಯಿತು. ಮುತಾಲಿಕ್‌ ಜೊತೆಗಿದ್ದವರು ಬಲೂನ್ ಗೆ ಗಾಳಿ ತುಂಬಿಸಿದಂತೆ ಮುತಾಲಿಕ್‌ ಅವರನ್ನು ಉಬ್ಬಿಸಿ ಕೊನೆಗೆ ಡಮಾರ್ ಮಾಡಿಬಿಟ್ಟರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಿರಿಯ ಮುಖಂಡ ಎಂ.ಕೆ. ವಿಜಯ ಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಮಾತನಾಡಿದರು. ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಕೆ.ಪಿ. ಶೆಣೈ, ಸದಾನಂದ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ, ರಾಮಚಂದ್ರ ಆಚಾರ್ಯ, ಸತೀಶ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಗೂ ಮುನ್ನ ಅನಂತಶಯನದಿಂದ ಬಂಡಿಮಠದವರೆಗೆ ಬಿಜೆಪಿ ವಿಜಯೋತ್ಸವ ನಡೆಯಿತು. ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯ್ಲಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ, ನಿರಂಜನ್ ಜೈನ್ ವಂದಿಸಿದರು.

































































































error: Content is protected !!
Scroll to Top