ನಾಳೆ ಮತ ಎಣಿಕೆ : ಹೀಗಿದೆ ಎಣಿಕಾ ಕೇಂದ್ರದ ವ್ಯವಸ್ಥೆ

ವಿಜಯೋತ್ಸವ ಆಚರಣೆಗಿಲ್ಲ ಅವಕಾಶ

ಬೆಂಗಳೂರು : ಮತ ಎಣಿಕೆ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಸಂಜೆಯ ವೇಳೆಗೆ ಯಾರು ಸರ್ಕಾರ ರಚನೆ ಮಾಡಲಿದ್ದಾರೆ? ಎಂಬ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಮತ ಎಣಿಕೆ ಕಾರ್ಯ ಆಯಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಸುಳಿವು ಸಿಗುವ ನಿರೀಕ್ಷೆ ಇದೆ. ಮತ ಎಣಿಕೆಗಾಗಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ತರಬೇತಿಯೂ ಪೂರ್ಣಗೊಂಡಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಶೇ. 73ರಷ್ಟು ಮತದಾನವಾಗಿದೆ. ಸಮೀಕ್ಷೆಗಳು ನಾನಾ ರೀತಿಯ ಭವಿಷ್ಯ ನುಡಿದಿದ್ದರೂ ಯಾರಿಗೂ ನಾಳೆ ಏನಾಗಬಹುದು ಎಂಬ ಅಂದಾಜು ಕೂಡ ಸಿಗುತ್ತಿಲ್ಲ.

ಪೊಲೀಸ್‌ ಸರ್ಪಗಾವಲು

ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶನಿವಾರ ಬೆಳಗ್ಗೆ 6ರಿಂದ ಮೇ 14ರ ಬೆಳಗ್ಗೆ 6 ಗಂಟೆಯವರೆಗೆ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಅನುಕೂಲವಾಗುವಂತೆ ಸಿಆರ್‌ಪಿಸಿ 1973ರ ಕಲಂ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ ಹಾಗೂ ಮತ ಎಣಿಕಾ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ವಿಜಯೋತ್ಸವ ಆಚರಣೆಗೆ ಅವಕಾಶವಿರುವುದಿಲ್ಲ.
ಮತಯಂತ್ರಗಳು ಇರುವ ಭದ್ರತಾ ಕೊಠಡಿಗೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ನಿರಂತರವಾಗಿ 24 ಗಂಟೆ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಮತ ಎಣಿಕೆ ಕೇಂದ್ರದ 200 ಮೀಟರ್ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತ ಎಣಿಕಾ ಕಾರ್ಯ ಸುಗಮವಾಗಿ, ಗೊಂದಲಗಳಿಲ್ಲದೆ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಮತ ಎಣಿಕಾ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ.

ಇವರು ಮಾತ್ರ ಬರಬಹುದು

ಎಣಿಕೆ ಕೇಂದ್ರಕ್ಕೆ ಸೂಪರ್‌ವೈಸರ್, ಕೌಂಟಿಂಗ್ ಅಸಿಸ್ಟೆಂಟ್ ಹಾಗೂ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ಮತದಾನ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅವರ ಕರ್ತವ್ಯಕ್ಕೆ ಅನುಗುಣವಾಗಿ ಪ್ರವೇಶ ಪತ್ರ ಅಥವಾ ಗುರುತಿನ ಚೀಟಿಗಳನ್ನು ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿದ್ದಾರೆ. ನಿಯೋಜಿತಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ತಮಗೆ ನೀಡಿರುವ ಗುರುತಿನ ಚೀಟಿ ಧರಿಸಿರಬೇಕು, ಪಾಸ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಭದ್ರತಾ ಸಿಬ್ಬಂದಿ ಕೇಳಿದಾಗ ಪಾಸುಗಳನ್ನು ತೋರಿಸಬೇಕು. ಅನವಶ್ಯಕ ಗೊಂದಲ, ವಾದಗಳಿಗೆ ಅವಕಾಶವಿರುವುದಿಲ್ಲ.

ಈ ವಸ್ತುಗಳನ್ನು ತರಬಾರದು

ಮತ ಎಣಿಕಾ ಕೇಂದ್ರಕ್ಕೆ ಬರುವವರು ನೀರಿನ ಬಾಟಲ್, ಮೊಬೈಲ್, ಕಡ್ಡಿಪೆಟ್ಟಿಗೆ, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು, ಅಭ್ಯರ್ಥಿಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಮತ ಎಣಿಕಾ ಸಿಬ್ಬಂದಿ ಮತ್ತು ಚುನಾವಣೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಲು ಪ್ರತ್ಯೇಕ ಪ್ರವೇಶ ಮಾರ್ಗಗಳನ್ನು ಮಾಡಲಾಗಿದೆ.

7.30ಗೆ ಸ್ಟ್ರಾಂಗ್‌ ರೂಮ್‌ ಓಪನ್‌

ಮತ ಎಣಿಕೆ ದಿನದಂದು ಸೂಕ್ತ ಭದ್ರತೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅರೆ ಸೇನಾಪಡೆ, ರಾಜ್ಯ ಪೊಲೀಸ್ ಪಡೆ ಭದ್ರತೆ ನೀಡಲಿದೆ. ಯಾವುದೇ ರೀತಿಯ ಅಹಿತಕರ ಘಟನೆ, ನಿಯಮಗಳ ಉಲ್ಲಂಘನೆ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ತಾಲೂಕಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಕ್ಷೇತ್ರಗಳಿಗೆ ಅನುಗುಣವಾಗಿ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7.30ಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತಯಂತ್ರಗಳು ಇರುವ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ಮತಯಂತ್ರಗಳ ಎಣಿಕೆ ಆರಂಭ ಮಾಡಲಾಗುತ್ತದೆ.







































































































































error: Content is protected !!
Scroll to Top