ದಾರಿ ದೀಪ : ಚುನಾವಣೆಗಳು – ಸರಕಾರಗಳು ಬರುತ್ತವೆ ಉರುಳುತ್ತವೆ

ರಾಜಕೀಯ ಚದುರಂಗದಾಟದಲ್ಲಿ ಕೌಟುಂಬಿಕ ಸಂಬಂಧಗಳು ಚದುರದಿರಲಿ

ನಾಡಿನ ಮನೆಮನಗಳಲ್ಲಿ ಮತವೇಶದ ರೋಷಾಗ್ನಿಯು ಬಿರುಬಿಸಿಲಿನಂತೆ ಕಾವೇರುತ್ತಿದೆ. ಚರ್ಚೆಗಳು ಗರಿಗೆದರುತ್ತಿವೆ. ರಾಜಕಾರಣದ ಕಣಕಣವು ನಾಡಿನಲ್ಲಿ ಮೈಮನಗಳನ್ನು ಹುರುಪುಗೊಳಿಸಿ ಆಖಾಡ ರಂಗೇರಿದೆ. ರಾಜಕೀಯ ಧುರೀಣರಿಗಿಂತ ಅಭಿಮಾನಿಗಳಲ್ಲಿ ಕದನ ಕುತೂಹಲ ಜೋರಾಗಿದೆ. ರಾಜಕಾರಣಿಗಳ ಮಾತಿನ ಬಾಣಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ನಡುವೆ ಸೌಹಾರ್ದ ಸಂಬಂಧಗಳು ಚುನಾವಣೆಯ ನೆಪದಲ್ಲಿ ಕೆಡುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಜಾಲಪ್ರಿಯರಿಗೆ ಪುಕ್ಕಟೆ ಮನರಂಜನೆಯ ಆಹಾರ ಒದಗುತ್ತಿದೆ.

ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಸರಕಾರಗಳು ಅರಳುತ್ತವೆ, ಉರುಳುತ್ತವೆ. ಮತದಾರ ಕೆರಳುವುದು ಸಭ್ಯವಲ್ಲ. ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಜನರೆದುರು ಅವರವರೇ ಕಚ್ಚಾಡುತ್ತಿರುತ್ತಾರೆ. ಮುಂದೆ ರಾಜಕಾರಣಿಗಳು ಒಂದೇ ಆಗಿರುತ್ತಾರೆ. ಕಾರ್ಯಕರ್ತರು ಬೀದಿ ಪಾಲಗುತ್ತಾರೆ. ನಾಯಕರ ಮೇಲೆ ಅಭಿಮಾನ ಇರಬೇಕು. ದುರಭಿಮಾನ ಸಲ್ಲ. ಅದೂ ಸಂಬಂಧಗಳನ್ನು ಹಾಳು ಮಾಡುವಂತಲ್ಲ. ಸಂಬಂಧಗಳು ಶಾಶ್ವತವಾಗಿರಬೇಕು. ರಾಜಕಾರಣಿಗಳ ವಾಗ್ಜರಿಯಲ್ಲಿ ಮುಳುಗಿ ಅಭಿಮಾನಿಗಳ ನಾಲಗೆ ವಾಗ್ವಾದಗೊಳ್ಳಬಾರದು. ಅವರ ಮುಖಕ್ಕೆ ಇವರು, ಇವರ ಮುಖಕ್ಕೆ ಅವರು ಕ್ಯಾಖರಿಸಿ ಉಗುಳಿಸಿ ಕೊಂಡು ಕೈಕೈಮಿಲಾಯಿಸುವ ಹಂತಕ್ಕೆ ತಲುಪಲುಬಹುದು. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಯಾರು ಯಾರ ಪರವಾಗಿಯೂ ಇರಬಹುದು. ಅದು ಅವರವರ ಒಲವು. ಅವರವರ ಇಷ್ಟ. ಆದರೆ ವೈಯಕ್ತಿಕ ಕೆಸರೆರಚಾಟಕ್ಕೆ ಅವಕಾಶಮಾಡುವುದು ಸರಿಯಲ್ಲ. ಪರ-ವಿರೋಧಗಳು ಸಹಜ. ಆಡಳಿತ ಸರಕಾರ ಇರಬೇಕಾದರೆ ವಿರೋಧ ಪಕ್ಷವು ಇರುವುದೇ. ಅದು ನಮ್ಮ ಮನೆಯ ಅಂಗಳಕ್ಕೆ ಬಂದು ನಿಲ್ಲಬಾರದು. ಹಿಂದೆ-ಮುಂದೆ ಆಡಿ ಕೊಳ್ಳುವಂತಿರ ಬಾರದು. ಮನೆ-ಮನೆಗಳ ನಡುವೆ ಆಗಲಿ, ನೆರೆಹೊರೆಯವರೊಂದಿಗಾಗಲಿ ಮನಸುಗಳನ್ನು ಕದಡುವುದಾಗಲಿ, ಕದಡಿಸುವುದಾಗಲಿ ಸರಿಯಲ್ಲ. ಮನಸ್ತಾಪಗಳನ್ನು ಮೈ ಮೇಲೆರೆದು ಸಂಬಂಧಗಳು ಒಡೆದು ಜಗಳ್ ಬಂಧಿಗೆ ಕಾರಣವಾಗಬಾರದು. ಸಮಾಜಕ್ಕೆ ಈ ಮೂಲಕ ಜಾಗೃತ ಮನೋಸ್ಥಿತಿ ಮುಖ್ಯ.

ಚುನಾವಣೆಯ ಸ್ಪರ್ಧೆ ನಾಯಕನಲ್ಲಿ ಅಭಿವೃದ್ಧಿಯ ವಿಷಯವಾಗಬೇಕೆ ಹೊರತು ಜಾತಿ, ಮತ ಧರ್ಮವಲ್ಲ. ಇತ್ತೀಚೆಗೆ ನೆಟ್‌ಫೈಟ್ ಎಂದರೆ ಪ್ರಬಲ ಸಮುದಾಯಗಳೊಂದಿಗಿನ ಜಿದ್ದಾಜಿದ್ದಿ ಎನ್ನುವಂತಾಗಿದೆ. ಈ ಬಾರಿಯ ಚುನಾವಣೆಗಳು ಜಾತಿ ಸಮುದಾಯಗಳ ನಡುವೆ ಕಂದಕ ಸೃಷ್ಟಿಯ ಬೆಳವಣಿಗೆಗಳಾಗುತ್ತಿವೆ. ಕೌಟುಂಬಿಕ ಕಲಹಕ್ಕೂ ದಾರಿಯಾಗುತ್ತಿವೆ. ಅಂತಃ ಕಲಹಗಳು ಜಾಸ್ತಿಯಾಗುತ್ತಿವೆ. ಸಂಬಂಧಗಳು ಬಿರುಕು ಬೀಳುತ್ತಿವೆ. ಮನೆಯ ಹೆಂಗೆಳೆಯರ ಗೋಳು ಹೇಳತೀರದಾಗಿದೆ. ಇದನ್ನೇ ಸಾರ್ವಜನಿಕಗೊಳಿಸಿ ಸಮಾಜದ ಇರಿಸು-ಮುರಿಸಿಗೂ ಕಾರಣವಾಗುತ್ತಿದೆ. ಮನಸುಗಳು ಒಡೆದು ಸಂಬಂಧಗಳು ಬಿರುಕು ಬಿದ್ದರೆ, ಅದಕ್ಕೆ ತುಪ್ಪ ಸುರಿಯುವ ಜಾಲತಾಣಗಳ ವದಂತಿಗಳಿಗೆ ಕಡಿಮೆ ಇಲ್ಲ. ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ಸ್ವೇಚ್ಚಾಚಾರದಿಂದ ವರ್ತಿಸುವುದು, ಸ್ವಾಭಿಮಾನವಿದೆ ಎಂದು ದರ್ಪದಿಂದ ಮೆರೆಯುವುದು ಅಹಂ ಭಾವನೆ ವ್ಯಕ್ತ ಪಡಿಸುವುದು ಶೋಭೆ ಅಲ್ಲ. ಒಡಹುಟ್ಟಿದ ಅಣ್ಣ ತಮ್ಮಂದಿರ ದಾಯಾದಿಗಳಂತೆ ಇಲಸಲ್ಲದ ಆರೋಪಗಳನ್ನು ಮಾಡಿಕೊಳ್ಳುತ್ತಾ, ನಮ್ಮ ಸರಕಾರ ಬಂದ್ರೆ ನೋಡಿಕೊಳ್ಳುತ್ತೇನೆನ್ನುವ ತೊಡೆತಟ್ಟಿಕೊಳ್ಳುತ್ತಿರುವ ಸನ್ನಿವೇಶ ಆಗಬಾರದು. ಸೌಹಾರ್ದತೆ ಕಾಪಾಡಿಕೊಳ್ಳುವಂತಹದ್ದು ಪ್ರತಿಯೊಬ್ಬ ನಾಗರಿಕನ ಸಾಮಾನ್ಯ ಜ್ಞಾನವಾಗಿದೆ. ರಾಜಕೀಯ ಚದುರಂಗದಾಟದಲ್ಲಿ ಕೌಟುಂಬಿಕ ಸಂಬಂಧಗಳು ಚದುರದಂತೆ, ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಊರು ಒಳ್ಳೆದಾದರೆ ನಾವು ಒಳ್ಳೆಯವರೆನಿಸಿಕೊಳ್ಳಲು ಮಾತ್ರ ಸಾಧ್ಯ.

✒️ ಸಂತೋಷ ನೆಲ್ಲಿಕಾರು









































































































error: Content is protected !!
Scroll to Top