ಕಾರ್ಕಳ : ನಾನೊಬ್ಬ ಉದ್ಯಮಿ ಆದರೂ ನನ್ನ ನಂಬಿಕೆ ಮತ್ತು ಭರವಸೆಗಳು ಇರುವುದು ಕೃಷಿ ಕ್ಷೇತ್ರದಲ್ಲಿ. ಭಾರತೀಯ ದೇಸಿ ಗೋವುಗಳ ಆಧಾರಿತ ಹೈನುಗಾರಿಕೆ ಮಾಡಿದಲ್ಲಿ ಒಂದು ಕುಟುಂಬ ಸ್ವಾವಲಂಬಿ ಆಗಿ ಬದುಕುವಷ್ಟು ಆದಾಯವನ್ನು ಪಡೆಯಬಹುದು ಎನ್ನುವುದು ನನ್ನ ನಂಬಿಕೆ. ನಾನು ಮುನಿಯಾಲಿನಲ್ಲಿ ದೇಸಿ ತಳಿಯ ಗೋಧಾಮವನ್ನು ಆರಂಭ ಮಾಡುವುದರ ಮೂಲಕ ಈ ನಂಬಿಕೆಯನ್ನು ಸಾಬೀತು ಪಡಿಸಿದ್ದೇನೆ ಎಂದು ಮೂಡಬಿದ್ರೆಯ ಎಸ್. ಕೆ. ಎಫ್. ಸಮೂಹ ಉದ್ಯಮ ಸಂಸ್ಥೆಗಳ ಸ್ಥಾಪಕ ಡಾ. ರಾಮಕೃಷ್ಣ ಆಚಾರ್ ಅವರು ಹೇಳಿದರು.
ಮಂಗಳೂರು ವಿವಿಯಿಂದ ಉದ್ಯಮರಂಗದ ಸಾಧನೆಗಾಗಿ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.
ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ದನ್ ಇಡ್ಯ ಅವರು ರಾಮಕೃಷ್ಣ ಆಚಾರ್ ಅವರಿಗೆ ಶಾಲು, ಫಲ ಪುಷ್ಪ, ನೆನಪಿನ ಕಾಣಿಕೆಗನ್ನಿತ್ತು ಸನ್ಮಾನಿಸಿದರು. ಶಿಕ್ಷಕ ಮತ್ತು ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಅಭಿನಂದನಾ ಭಾಷಣ ಮಾಡಿ, ಶೂನ್ಯದಿಂದ ಪರಿಶ್ರಮದ ಮೂಲಕ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಡಾ. ರಾಮಕೃಷ್ಣ ಆಚಾರ್ ಅವರ ಸಾಧನೆಯು ಅನುಸರಣೀಯ ಎಂದರು.
ಕ. ಸಾ. ಪ. ದತ್ತಿನಿಧಿ ಉಪನ್ಯಾಸ
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಆಶ್ರಯದಲ್ಲಿ ರತ್ನಾವತಿ ದತ್ತಿನಿಧಿ ಉಪನ್ಯಾಸ ಮಾಲಿಕೆಯ ಅಂಗವಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕುದಿ ವಸಂತ ಶೆಟ್ಟಿ ಅವರು ಶಿಕ್ಷಣ- ಶಿಕ್ಷಕ ಮತ್ತು ಗ್ರಾಮೀಣ ಬದುಕು ಎಂಬ ವಿಷಯದ ಮೇಲೆ ಪ್ರಧಾನ ಭಾಷಣ ಮಾಡಿದರು. ಇಂದಿನ ಶಿಕ್ಷಕರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುವ ಅಗತ್ಯವಿದೆ ಮತ್ತು ಸಮಾಜವು ಶಿಕ್ಷಕರನ್ನು ಹೆಚ್ಚು ಗೌರವಿಸುವ ಅಗತ್ಯ ಇದೆ ಎಂದರು. ಶಿಕ್ಷಕರು ಪಾಠವನ್ನು ಮಾಡುವುದು ಮಾತ್ರ ಮುಖ್ಯವಲ್ಲ. ಪಾಠದ ಒಳಗಿರುವ ಮೌಲ್ಯಗಳನ್ನು ಗುರುತಿಸಿ ಅವುಗಳನ್ನು ಮಕ್ಕಳಿಗೆ ತಿಳಿಸುವುದು ಮುಖ್ಯವೆಂದರು. ದತ್ತಿನಿಧಿಯ ಸ್ಥಾಪಕರಾದ ಶ್ರೀಮತಿ ರತ್ನಾವತಿ ಅವರನ್ನು ಮತ್ತು ದತ್ತಿ ಉಪನ್ಯಾಸ ನೀಡಿದ ಕುದಿ ವಸಂತ ಶೆಟ್ಟಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕ.ಸಾ.ಪ. ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಮುದ್ರಾಡಿ ಮತ್ತು ಹಿರಿಯರಾದ ತುಕಾರಾಮ್ ನಾಯಕ್ ಉಪಸ್ಥಿತರಿದ್ದರು. ಕಾರ್ಕಳ ರಂಗ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ ಸ್ವಾಗತಿಸಿದರು. ಗಿರೀಶ್ ರಾವ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಕಳ ಘಟಕದ ಕಾರ್ಯದರ್ಶಿ ದೇವದಾಸ್ ಕೆರೆಮನೆ ವಂದಿಸಿದರು.

























