ಬಿಜೆಪಿಯವರ ಖಾತೆಗೆ ಹಣ ಸಂದಾಯ – ಶುಭದ ರಾವ್‌ ಆರೋಪ

ಕಾರ್ಕಳ : ಶಾಸಕ ಸುನಿಲ್‌ ಕುಮಾರ್ ಆಪ್ತರ ಖಾತೆಗೆ ಕಮಿಷನ್ ಸಂದಾಯವಾಗುತ್ತಿದೆ. ಇದು ಸುಳ್ಳು ಎಂದು ಪ್ರಮಾಣ ಮಾಡುವ ಧೈರ್ಯ ಶಾಸಕರಿಗೆ ಇದೆಯೇ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಶುಭದ ರಾವ್ ಸವಾಲು ಹಾಕಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಹನವನ್ನು ನಿಗಮದ ವತಿಯಿಂದ ನೀಡಲಾಗುತ್ತಿದೆ. ಈ ಹಿಂದೆ ವಾಹನ ಮಾಲಕರು ಎಗ್ರಿಮೆಂಟ್ ನೊಂದಿಗೆ ಮಾಸಿಕ 32 ರಿಂದ ‌35 ಸಾವಿರ ರೂ. ಬಾಡಿಗೆ ರೂಪದಲ್ಲಿ ‌ಪಡೆಯುತ್ತಿದ್ದರು. ಸುನೀಲ್ ಕುಮಾರ್ ಅವರು ಇಂಧನ ಸಚಿವರಾದ ತಕ್ಷಣ ತಾನು ನೇಮಕ ಮಾಡಿದ ನೂತನ ಎಂ.ಡಿ. ಮೂಲಕ ಅವಧಿಗೂ ಮುನ್ನವೇ ಎಲ್ಲ ಅಗ್ರಿಮೆಂಟ್ ಗಳನ್ನು ರದ್ದುಪಡಿಸಿ, 603 ವಾಹನಗಳಿಗೆ ಏಕ ಟೆಂಡರ್ ಮಾಡುವುದರ ಮೂಲಕ ತನ್ನ ಆಪ್ತನ ಮಾಲಕತ್ವದ ಟ್ರಾವೆಲ್ ವಾಲ್ಡ್ ಸಂಸ್ಥೆಗೆ ಬಾಡಿಗೆಯನ್ನು ಹೆಚ್ಚಿಸಿ ಮಾಸಿಕ 45‌ ಸಾವಿರ ರೂ. ಬಾಡಿಗೆಯನ್ನು ನಿಗದಿ ಮಾಡಿರುತ್ತಾರೆ. ಒಂದು ವಾಹನದಲ್ಲಿ 13 ಸಾವಿರದಂತೆ 603 ವಾಹನದ ಸುಮಾರು‌ 80 ಲಕ್ಷ ರೂ. ಹಣವು ಕಮಿಷನ್ ರೂಪದಲ್ಲಿ ಸಂದಾಯವಾಗುತ್ತಿದ್ದು ಇದರಲ್ಲಿ ಕಾರ್ಕಳದ 60 ಜನ ಆಪ್ತರ ಖಾತೆಗೆ ತಿಂಗಳಿಗೆ 25‌ ಸಾವಿರ ರೂ.ವಿನಂತೆ ಜಮೆಯಾಗುತ್ತಿದೆ ಎಂದು ಆರೋಪಿಸಿದರು.

ಇದೇ ತರಹ ಹೆಸ್ಕಾಂ, ಚೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಮತ್ತು ಮೆಸ್ಕಾಂನಲ್ಲಿ 1000ಕ್ಕೂ ಹೆಚ್ಚು ವಾಹನದ ಟೆಂಡರಿಗೆ ಮುಂದಾದಾಗ ಮೆಸ್ಕಾಂ ವಿಭಾಗದ 210 ವಾಹನ ಮಾಲಕರು ಕೋರ್ಟ್ ನಿಂದ ತಡೆ ತರುತ್ತಾರೆ. ಈಗ ಯಥಾಸ್ಥಿತಿ ಮುಂದುವರಿಯುತ್ತಿದೆ. ಈಗ ಪ್ರಶ್ನೆ ಏನಂದರೆ 60 ಜನ ಶಾಸಕರ ಆಪ್ತರು ಪಡೆಯವ ಈ ಹಣ ಕಮಿಷನ್ ಹಣವಲ್ಲವೆ ? ಎಂದು ಶುಭದ ಪ್ರಶ್ನಿಸಿದರು.
ಬಿಜೆಪಿ ಕಾರ್ಯಕರ್ತರಲ್ಲಿ ನನ್ನ ಮನವಿ, ನಿಮ್ಮ ಬದ್ಧತೆಯ ಬಗ್ಗೆ ನನಗೆ ಗೌರವವಿದೆ. ತಾವುಗಳು ಆತ್ಮವಿಮರ್ಶೆ ಮಾಡಿಕೊಳ್ಳಿ. ಶಾಸಕರ ಮೇಲೆ ಭ್ರಷ್ಟಾಚಾರದ ದೊಡ್ಡ ಆರೋಪ ಬರಲು ಕಾರಣವೇನು ? ನಿಮ್ಮ ಪಕ್ಷದ ಕೆಲವು ನಾಯಕರಿಗೆ ಅವರ ನಡತೆಯ ಬಗ್ಗೆ ಬೇಸರವಿದೆಯಲ್ಲಾ ಯಾಕೆ ? ಅವರ ಸ್ವಾರ್ಥಕ್ಕೆ ನಿಮ್ಮನ್ನು ಹೇಗೂ ಬಳಸಿಕೊಳ್ಳುತ್ತಾರೆ. ಅವರ ಲಾಭಕ್ಕೆ ನಡೆಯುವ ಕಾರ್ಯಕ್ರಮಗಳಲ್ಲಿ ತಾವುಗಳು ಕೇವಲ ಸ್ವಯಂ ಸೇವಕನಾಗಿ ದುಡಿಯಲು ಮಾತ್ರ ಸೀಮಿತವಾಗುತ್ತೀರಿ ಅಷ್ಟೇ ಎಂದರು.

ಕಾಂಗ್ರೆಸ್‌ ಯೋಜನೆ ಮನೆ ತಲುಪಲಿದೆ
ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ‌ಕಾರ್ಡಿನ ಫಲಾನುಭವಿಗಳಾಗುವಿರಿ ಎನ್ನುವುದು ನೆನಪಿರಲಿ. ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ತಾಯಿಯ ಅಥವಾ ಅಕ್ಕನ ಖಾತೆಗೆ ಪ್ರತೀ ತಿಂಗಳು 2000 ಹಣ ಸಂದಾಯವಾಗುತ್ತದೆ, ಉಚಿತ ವಿದ್ಯುತ್ ಮೂಲಕ ನಿಮ್ಮ ಮನೆಯ ಆರ್ಥಿಕ ಹೊರೆ ಕಡಿಮೆಯಾಗುತ್ತದೆ, ನಿಮ್ಮನೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗೆ ಉದ್ಯೋಗ ಸಿಗುತ್ತದೆ. ಹೀಗೆ ಅನೇಕ ಕಾಂಗ್ರೇಸ್ ಯೋಜನೆಗಳು ನಿಮ್ಮ ಮನೆ ತಲುಪಲಿದೆ. ಹಾಗಾಗಿ ಕಾರ್ಕಳದಲ್ಲಿ ಭ್ರಷ್ಟಾಚಾರಕ್ಕೆ ಅವಕಾವೇ ಇಲ್ಲ ಎಂದು ಈ ಚುನಾವಣೆಯಲ್ಲಿ ತೋರಿಸಿ ಕೊಡೋಣ. ಇಲ್ಲವಾದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ, ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಿಟ್ಟೆ ದಿನಕರ್ ಶೆಟ್ಟಿ ಉಪಸ್ಥಿತರಿದ್ದರು.

















































error: Content is protected !!
Scroll to Top