ಪಕ್ಷಾಂತರ ಮಾಡಿದ ಕ್ಷಣಾರ್ಧದಲ್ಲಿ ಟಿಕೆಟ್
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಮೊಹಿಯುದ್ದೀನ್ ಬಾವಾ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಮೊಹಿಯುದ್ದೀನ್ ಬಾವಾ ಮತ್ತು ಇನಾಯತ್ ಅಲಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಕೈ ಹೈಕಮಾಂಡ್ ಅಲಿ ಅವರಿಗೆ ಟಿಕೆಟ್ ನೀಡಿದೆ. ಈ ಬಗ್ಗೆ ಮೊದಲೇ ವಿಷಯ ಅರಿತಿದ್ದ ಬಾವ ಟಿಕೆಟ್‌ಗಾಗಿ ಜೆಡಿಎಸ್ ಪಕ್ಷದ ಎಚ್.ಡಿ. ದೇವೆಗೌಡ ಸೇರಿದಂತೆ ಹಿರಿಯ ಮುಖಂಡರನ್ನು ಸಂಪರ್ಕಿಸಿದ್ದರು. ಮಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳು ಇದ್ದರು. ರಾಹುಲ್ ಗಾಂಧಿಯವರು ಕಳಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ಅಂತ ಹೇಳಿದ್ದರು.ಯಾವುದೇ ಪ್ರಭಾವ ಇಲ್ಲದೇ ಟಿಕೆಟ್ ಕೊಡೋದಾಗಿ ಹೇಳಿದ್ದರು. ಸಿಇಸಿ ಚೇರ್‌ಮೆನ್ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು. ಶೇ.78 ಜನರು ನನಗೆ ಆಶೀರ್ವಾದ ಮಾಡಿದ್ದರು, ಶೇ.7 ಈಗಿನ ಅಭ್ಯರ್ಥಿ ಪರ ಇತ್ತು. ಹೀಗಾಗಿ ಮೋಹನ್ ಪ್ರಕಾಶ್ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಅಂದಿದ್ರು. ಆದರೆ ರಾಹುಲ್ ಗಾಂಧಿ ಕೋಲಾರಕ್ಕೆ ಬಂದಾಗ ಮತ್ತೆ ಇನಾಯತ್ ಆಲಿ ಲಾಬಿ ಮಾಡಿದರೂ ರಾಹುಲ್ ಗಾಂಧಿ ಗಮನ ಕೊಟ್ಟಿಲ್ಲ. ಇದಾದ ಬಳಿಕ ಡಿಕೆಶಿಯವರು ಖರ್ಗೆ ಅವರ ಜತೆ ಹೋಗಿ ನನ್ನ ಹೆಸರು ತಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವಾಮಮಾರ್ಗ ಉಪಯೋಗಿಸಿ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿರುವ ಬಾವಾ, ಒಬ್ಬ ಗುತ್ತಿಗೆದಾರನನ್ನು ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇದು ಟಿಕೆಟ್ ಮಾರಾಟ, ಕಾಂಗ್ರೆಸ್ ಪಕ್ಷಕ್ಕೆ ಇದು ಶೇಮ್. ಡಿಕೆ ಶಿವಕುಮಾರ್ ನನ್ನನ್ನ ವೈರಿಯಾಗಿ ಕಾಡಿ ಇನಾಯತ್ ಆಲಿಗೆ ಟಿಕೆಟ್ ಕೊಟ್ಟಿದ್ದಾರೆ. ಇನಾಯತ್ ಆಲಿ ಬಿಜೆಪಿ ವಿರುದ್ಧ ಹೋರಾಟ ಮಾಡಿಲ್ಲ, ನನ್ನ ಅಭಿಮಾನಿಗಳಿಗೆ ಹೊರಗಡೆಯಿಂದ ಜನ ತಂದು ದುಡ್ಡಿನ ಆಮಿಷ ಒಡ್ಡಿದರು ಎಂದು ಆರೋಪಿಸಿದರು.
























