ಹೆಬ್ರಿ : ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್ ಪೋಸ್ಟ್‌ನಲ್ಲಿ ಚುನಾವಣೆ ನಿಮಿತ್ತ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಅತಿ ವೇಗದಿಂದ ಬಂದ ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ಏ. 19 ರ ರಾತ್ರಿ ಸಂಭವಿಸಿದೆ.
ವಿಧಾನ ಸಭಾ ಚುನಾವಣೆ ಪ್ರಯುಕ್ತ ಚೆಕ್‌ಪೋಸ್ಟ್ ತಪಸಣಾ ತಂಡದಲ್ಲಿ ನಿಯೋಜಿತರಾಗಿರುವ ವಿಶ್ವನಾಥ ಅವರು ಹೆಬ್ರಿ ಠಾಣೆಯ ಎ.ಎಸ್.ಐ ಮಹಾಲಿಂಗ, ಕಾನ್‌ಸ್ಟೆಬಲ್ ರೆಹಮತ್ ಮತ್ತು ಅಬಕಾರಿ ಇಲಾಖೆಯ ಕೃಷ್ಣ ಆಚಾರಿ ಅವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ 11.30 ಗಂಟೆಗೆ ರಾಜೇಂದ್ರ ಜೈನ್ ಎಂಬವರು ಅಗುಂಬೆ ಕಡೆಯಿಂದ ಅತಿ ವೇಗವಾಗಿ ಅಶೋಕ್ ಲೈಲ್ಯಾಂಡ್ ಗೂಡ್ಸ್ (KA.19.AD.2342) ವಾಹನವನ್ನು ಚಲಾಯಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ರೆಹಮತ್ ಅವರ ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಕೃಷ್ಣ ಆಚಾರಿಯವರಿಗೆ ತಲೆಯ ಬಳಿ ಗಾಯವಾಗಿದೆ. ಗಾಯಾಳುಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವನಾಥ ಅವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.




















