ಮೋದಿ ಕುಲನಾಮ ಅವಹೇಳನ : ರಾಹುಲ್‌ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಣೆ

ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮೋದಿ ಕುಲನಾಮ ಅವಹೇಳನಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯ ಶಿಕ್ಷೆಗೆ ತಡೆಯಾಜ್ಞೆ ನೀಡಲು ಸೂರತ್ ಕೋರ್ಟ್ ನಿರಾಕರಿಸಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ರಾಹುಲ್ ಗಾಂಧಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಕ್ಕೆ ನ್ಯಾಯಾಲಯ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ಏ.3 ರಂದು ಅಪರಾಧ ಸಾಬೀತಾದ ನಂತರ ಮೇಲ್ಮನವಿ ಸಲ್ಲಿಸಿದ್ದ ರಾಹುಲ್ ಗಾಂಧಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು.
ಸೂರತ್‌ನ ನ್ಯಾಯಾಲಯ ಮಾ.23 ರಂದು ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದ ನಂತರ ರಾಹುಲ್‌ ಗಾಂಧಿ ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ , ಮೋದಿ ಎಂಬ ಹೆಸರು ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
ರಾಹುಲ್​ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಗುಜರಾತ್​ನ ಸೂರತ್ ನ್ಯಾಯಾಲಯವು ಮಾರ್ಚ್ 23 ರಂದು ತೀರ್ಪು ನೀಡಿದೆ.

















































error: Content is protected !!
Scroll to Top