ಅತ್ತೂರು ಶಾಲಾ ಹಳೆ ವಿದ್ಯಾರ್ಥಿಗಳ ಪುನರ್‌ ಮಿಲನ ಕೂಟ

ಸಾಮಾಜಿಕ ಕರ್ತವ್ಯ ಪಾಲನೆಯೊಂದಿಗೆ ಅರ್ಥಪೂರ್ಣ ಕಾರ್ಯಕ್ರಮ : ಸಂತೋಷ್‌ ಹೆಗ್ಡೆ

ಕಾರ್ಕಳ : ಅತ್ತೂರು ಶಾಲಾ ಹಳೆ ವಿದ್ಯಾರ್ಥಿಗಳ ಪುನರ್‌ ಮಿಲನ ಕಾರ್ಯಕ್ರಮ ಸಹಪಾಠಿಗಳನ್ನು ಬೆರೆಯುವಂತೆ ಮಾಡಿದಲ್ಲದೇ ಗುರುವಂದನಾ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿದೆ. ಇದರೊಂದಿಗೆ ಸಾಮಾಜಿಕ ಕರ್ತವ್ಯ ಪಾಲನೆಯೂ ಆಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್‌ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಗುರುವಾರ ಅತ್ತೂರು ಸಂತ ಲಾರೆನ್ಸ್‌ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಪರಿಸ್ಥಿತಿಗೆ ಸಮಾಜವೇ ಕಾರಣ
ತಮ್ಮ ವೃತ್ತಿ ಅನುಭವದ ಬಗ್ಗೆ ಮಾತನಾಡಿದ ಸಂತೋಷ್‌ ಹೆಗ್ಡೆಯವರು, ಕರ್ನಾಟಕ ಲೋಕಾಯುಕ್ತನಾಗಿ ಕರ್ತವ್ಯಕ್ಕೆ ಸೇರುವ ಮೊದಲು ಸಮಾಜದ ಬಗ್ಗೆ ಹೆಚ್ಚಿನ ತಿಳುವಳಿಕೆ ನನಗೆ ಇರಲಿಲ್ಲ. ನಾನು ಸುಖವಾಗಿದ್ದೇನೆ ಅಂತೆಯೇ ಎಲ್ಲರೂ ಸುಖವಾಗಿದ್ದಾರೆ ಅಂದುಕೊಂಡಿದ್ದೆ. ಆದರೆ ಲೋಕಾಯುಕ್ತಕ್ಕೆ ಬಂದ ಬಳಿಕ ಸಮಾಜದಲ್ಲಿನ ಮುಖ್ಯವಾಗಿ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟತೆ, ಅನ್ಯಾಯದ ಬಗ್ಗೆ ಅರಿತುಕೊಂಡೆ. ಇವತ್ತಿನ ಪರಿಸ್ಥಿತಿಗೆ ವ್ಯಕ್ತಿ ಕಾರಣನಲ್ಲ. ಬದಲಾಗಿ ಸಮಾಜ ಕಾರಣವಾಗಿದೆ. ಹಿಂದೆಲ್ಲಾ ತಪ್ಪು ಮಾಡಿದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು, ಆದರೆ, ಪ್ರಸ್ತುತ ಸಮಾಜ ಬದಲಾಗಿದ್ದು ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಪೂಜಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ಮಾಡಿದರು. ಶಾಲಾ ಸಂಚಾಲಕ ರೆ. ಫಾ. ಅಲ್ಭನ್‌, ಶಿಕ್ಷಕ ಪ್ರದೀಪ್‌ ನಾಯಕ್‌, ಶಿಕ್ಷಕಿ ಲೋನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಶೆರಲ್‌ ಸ್ವಾಗತಿಸಿ, ಶಿಕ್ಷಕ ರಾಜೇಂದ್ರ ಭಟ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಗುರುವಂದನೆ

ಅತ್ತೂರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಸುಮಾರು 55 ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ಈ ವೇಳೆ ತಮ್ಮ ತಮ್ಮ ಶಿಕ್ಷಕರ ಕಾಲಿಗೆರಲಿ ಆಶೀರ್ವಾದ ಪಡೆಯುತ್ತಿದ್ದರು. ಹಳೆ ವಿದ್ಯಾರ್ಥಿಗಳು ಮತ್ತು ನಿವೃತ್ತ ಶಿಕ್ಷಕರಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿತ್ತು.

ಸಿಯಾ ಸಂತೋಷ್‌ ನಾಯಕ್‌

ಹಳೆ ವಿದ್ಯಾರ್ಥಿಗಳು ಬೆರೆಯಲು ಒಂದು ಅಪೂರ್ವ ಅವಕಾಶ ಮಾಡಿಕೊಟ್ಟ ಹಳೆ ವಿದ್ಯಾರ್ಥಿ ಸಿಯಾ ಸಂತೋಷ್‌ ನಾಯಕ್‌ ಮತ್ತವರ ಬ್ಯಾಚ್‌ನ ವಿದ್ಯಾರ್ಥಿಗಳನ್ನು ಸಂತೋಷ್‌ ಹೆಗ್ಡೆ ಸನ್ಮಾನಿಸಿದರು. ಸಿಯಾ ಸಂತೋಷ್‌ ಅವರು ಈ ಒಂದು ಕಾರ್ಯಕ್ರಮ ಸಂಘಟಿಸಲು ಕಳೆದ ಒಂದೂವರೆ ವರ್ಷಗಳಿಂದ ತೊಡಗಿಸಿಕೊಂಡಿದ್ದರು.

ವಿದ್ಯಾರ್ಥಿಗಳ ಪುನರ್‌ ಮಿಲನ

ಸಹಪಾಠಿಗಳು ಗುಂಪು ಗುಂಪಾಗಿ ಸೇರಿಕೊಂಡು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿರುವ, ಗ್ರೂಪ್‌ ಫೋಟೋ ಕ್ಲಿಕ್ಕಿಸುತ್ತಿರುವ ದೃಶ್ಯ ಕಂಡುಬರುತ್ತಿತ್ತು. 60 ಎಸ್ಸೆಸೆಲ್ಸಿ ಬ್ಯಾಚಗಳ 1300 ಪೂರ್ವ ವಿದ್ಯಾರ್ಥಿಗಳ ಸಮಾಗಮ ಬಹಳ ವಿಶೇಷವಾಗಿತ್ತು. ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಸಂಭ್ರಮ ಪಟ್ಟರು. ಅವರ ಪಾಲಿಗಿದೊಂದು ಭಾವನಾತ್ಮಕ ಕ್ಷಣವಾಗಿತ್ತು.

ಶಿಕ್ಷಕರಿಗೆ ಸನ್ಮಾನ
ಕಾರ್ಯಕ್ರಮದ ಸಂಘಟಕ ಸಿಯಾ ಸಂತೋಷ್‌ ನಾಯಕ್‌ ಹಾಗೂ ಅವರ ಬ್ಯಾಚ್‌ನವರನ್ನು ಸನ್ಮಾನಿಸಲಾಯಿತು.
















































error: Content is protected !!
Scroll to Top