ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನು ಅಂದರೆ ವರ್ಗಾವಣೆ ಲಿಖಿತ ಪತ್ರಗಳ ಅಧಿನಿಯಮ 1881 ಪ್ರಕಾರ ಒಬ್ಬ ವ್ಯಕ್ತಿ ತಾನು ಪಡೆದಿರುವ ನ್ಯಾಯಬದ್ಧ ಪ್ರತಿಫಲದ ಸಂದಾಯಕ್ಕಾಗಿ ಇನ್ನೊಬ್ಬ ವ್ಯಕ್ತಿಗೆ ನೀಡಿದ ಚೆಕ್ಕನ್ನು ನಗಧೀಕರಣಕ್ಕಾಗಿ ಸಂಬಂಧಪಟ್ಟ ಬ್ಯಾಂಕಿಗೆ ಹಾಜರು ಪಡಿಸಿದ ಸಂದರ್ಭದಲ್ಲಿ ಚೆಕ್ ನೀಡಿದಾತನ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇರುವುದಿಲ್ಲ ಎಂಬ ಕಾರಣಕ್ಕಾಗಿ ಸೂಕ್ತ ಷರಾದೊಂದಿಗೆ ಹಿಂತಿರುಗಿಸಿದಾಗ ಅಥವಾ ಯಾವುದೇ ವ್ಯಕ್ತಿಯು ಮೇಲ್ಕಾಣಿಸಿದ ಕಾರಣಕ್ಕಾಗಿ ಚೆಕ್ಕು ನೀಡಿದ ನಂತರ ಚೆಕ್ ಪಡೆದಾತನಿಗೆ ತಿಳಿಸದೇ ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿದಾಗ ಅಥವಾ ಚೆಕ್ ನೀಡಿದ ನಂತರ ಚೆಕ್ ಪಡೆದಾತನಿಗೆ ತಿಳಿಸದೇ ತನ್ನ ಬ್ಯಾಂಕ್ ಖಾತೆಯ ಹಣ ಪಾವತಿ ತಡೆ ಹಿಡಿದಾಗ ಅಂತಹ ಪ್ರಕರಣವನ್ನು ಚೆಕ್ ಅಮಾನ್ಯ ಪ್ರಕರಣ ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಚೆಕ್ಕು ನೀಡಿರುವ ವ್ಯಕ್ತಿಯು ಕಾನೂನಿನನ್ವಯ ಅಪರಾಧಿ ಸ್ಥಾನದಲ್ಲಿ ನಿಂತು ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ. ಆದರೆ ವಿವಾದಿತ ಚೆಕ್ಕಿನಲ್ಲಿ ಇರುವ ಸಹಿಯು ಚೆಕ್ ನೀಡಿರುವ ವ್ಯಕ್ತಿಯ ಸಹಿಯಾಗಿರದೇ ಚೆಕ್‍ನಲ್ಲಿ ಇರುವ ಸಹಿ ಮತ್ತು ಚೆಕ್ ನೀಡಿರುವ ವ್ಯಕ್ತಿಯ ಬ್ಯಾಂಕ್ ಖಾತೆಗೆ ದಾಖಲೆಗಳಲ್ಲಿರುವ ಮಾದರಿ ಸಹಿ ಇವುಗಳಿಗೆ ಹೊಂದಾಣಿಕೆ ಆಗದೇ ಇರುವ ಸಂದರ್ಭದಲ್ಲಿ ಅಥವಾ ವಿವಾದಿತ ಚೆಕ್‍ನಲ್ಲಿ ಬರೆದಿರುವ ವಿವರಗಳು ಒಂದಕ್ಕೊಂದು ಹೊಂದಾಣಿಕೆ ಇರದೇ ಅವುಗಳಲ್ಲಿ ವ್ಯತ್ಯಾಸ ಇದ್ದಾಗ ಅಥವಾ ಚೆಕ್ಕನ್ನು ತಿದ್ದಿರುವುದು ಮೇಲ್ನೊಟಕ್ಕೆ ಕಂಡು ಬಂದಲ್ಲಿ ಅಥವಾ ಚೆಕ್ಕಿಗೆ ಬ್ಯಾಂಕ್ ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಅಥವಾ ಚೆಕ್ ನೀಡಿದ ವ್ಯಕ್ತಿ ತಾನು ಚೆಕ್ ನೀಡಿದ ನಂತರ ಮೃತಪಟ್ಟಲ್ಲಿ ಅಥವಾ ವಿವಾದಿತ ಚೆಕ್, ಚೆಕ್ ನೀಡಿರುವ ವ್ಯಕ್ತಿಯ ಬ್ಯಾಂಕ್ ಖಾತೆಗೆ ಸಂಬಂಧಪಡದೇ ಬೇರೆ ಯಾವುದಾದರೂ ವ್ಯಕ್ತಿಯ ಖಾತೆಗೆ ಸಂಬಂಧಪಟ್ಟ ಸಂದರ್ಭಗಳಲ್ಲಿ ಪ್ರಕರಣವು ಚೆಕ್ ಅಮಾನ್ಯ ಪ್ರಕರಣದ ವ್ಯಾಪ್ತಿಯೊಳಗೆ ಬರುವುದಿಲ್ಲ ಮತ್ತು ಮೇಲ್ಕಾಣಿಸಿದ ಕಾನೂನಿನ ಅಂಶಗಳು ಅನ್ವಯವಾಗುವುದಿಲ್ಲ.
ಆದರೆ ಇಂತಹ ಸಂದರ್ಭಗಳಲ್ಲಿ ಒಂದು ವೇಳೆ ಚೆಕ್ ನೀಡಿದ ವ್ಯಕ್ತಿಯು ಜೀವಂತವಾಗಿದ್ದಲ್ಲಿ ಚೆಕ್ ಪಡೆದ ವ್ಯಕ್ತಿಯು ಆತನ ವಿರುದ್ದ ಭಾರತೀಯ ದಂಡ ಸಂಹಿತೆಯ (ಇಂಡಿಯನ್ ಪೆನಲ್ ಕೋಡ್) ಕಲಂ 420ರ ಅನ್ವಯ ಮೋಸ ಮಾಡಿದ ಅಪರಾಧಕ್ಕಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು. ತನಗೆ ಚೆಕ್ ನೀಡಿದ ವ್ಯಕ್ತಿಯಿಂದ ನ್ಯಾಯ ಬದ್ಧವಾಗಿ ಬರಲಿಕ್ಕಿರುವ ಹಣವನ್ನು ವಸೂಲು ಮಾಡುವುದಕ್ಕಾಗಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಧಾವೆಯನ್ನು ದಾಖಲು ಮಾಡಬಹುದಾಗಿದೆ. ಅದೇ ರೀತಿಯಲ್ಲಿ ಚೆಕ್ ನೀಡಿದ ವ್ಯಕ್ತಿಯು ಜೀವಂತವಾಗಿದ್ದು ಆತನಿಂದ ಚೆಕ್ ಪಡೆದ ವ್ಯಕ್ತಿ ಮೃತಪಟ್ಟ ಸಂಧರ್ಭದಲ್ಲಿ ಆತನ/ಳ ವಾರೀಸುದಾರರು ನಿಗದಿತ ಅವಧಿಯೊಳಗಾಗಿ ನ್ಯಾಯಾಲಯದಲ್ಲಿ ಚೆಕ್ ನೀಡಿದ ವ್ಯಕಿಯ ವಿರುದ್ದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಅಥವಾ ಇವುಗಳ ಪೈಕಿ ಯಾವುದಾದರೂ ಒಂದು ರೀತಿಯ ಪ್ರಕರಣವನ್ನು ದಾಖಲು ಮಾಡಿ ಚೆಕ್ಕಿಗೆ ಹಣವನ್ನು ವಸೂಲು ಮಾಡಬಹುದಾಗಿದೆ. ಯಾವುದೇ ಸಂದರ್ಭದಲ್ಲಿ ದಿನಾಂಕ ಮತ್ತು ಮೊತ್ತವನ್ನು ಬರೆಯದೇ ಖಾಲಿ ಚೆಕ್ಕಿಗೆ ಸಹಿ ಮಾಡಿ ಇನ್ನೊಬ್ಬ ವ್ಯಕ್ತಿಗೆ ಚೆಕ್ಕನ್ನು ನೀಡುವ ಹವ್ಯಾಸವು ಬಹಳ ಅಪಾಯಕಾರಿಯಾಗಿದ್ದು ಇದರಿಂದ ಚೆಕ್ ನೀಡಿದ ವ್ಯಕ್ತಿ ಮುಂದಕ್ಕೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಉಂಟಾಗಬಹುದು.
ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು,
ಕಾರ್ಕಳ
ಮೊ: 98452 32490/ 96116 82681
























