ಕಾರ್ಕಳದ ಹುರಿಯಾಳುಗಳ ಆಸ್ತಿ ವಿವರ

ಉದಯ್‌ ಕುಮಾರ್‌ ಶ್ರೀಮಂತರು

ಕಾರ್ಕಳ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರ್ಕಳದಿಂದ ಒಟ್ಟು 10 ಮಂದಿ ಉಮೇದುವಾರಿಕೆ ಸಲ್ಲಿಸಿದ್ದು, ಇವರಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ ಉದಯ್‌ ಕುಮಾರ್‌ ಶೆಟ್ಟಿ ಮತ್ತು ಪಕ್ಷೇತರವಾಗಿ ಸ್ಪರ್ಧಿಸಲಿರುವ ಪ್ರಮೋದ್‌ ಮುತಾಲಿಕ್‌ ಹೆಸರು ಮುಂಚೂಣಿಯಲ್ಲಿದೆ. ಬಿರು ಬಿಸಿಲಿನಲ್ಲೂ ಅಬ್ಬರದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಅಭ್ಯರ್ಥಿ ರಿಕ್ಷಾ ಚಾಲಕ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಮೌನವಾಗಿಯೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ಮಮತಾ ಹೆಗ್ಡೆಯವರ ಹೆಸರೂ ಜನರ ಬಾಯಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಕಾರ್ಕಳದಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಾರ್ಕಳದ ಸ್ಪರ್ಧಿಗಳಲ್ಲಿ ಬಹಳ ಹುಮ್ಮಸಿನಿಂದ ಪ್ರಚಾರ ಚಟುವಟಿಕೆಗಳನ್ನು ಕೈಗೊಂಡಿರುವಂತಹ ಉದಯ್‌ ಕುಮಾರ್‌ ಶೆಟ್ಟಿ, ಸುನಿಲ್‌ ಕುಮಾರ್‌ ಮತ್ತು ಪ್ರಮೋದ್‌ ಮುತಾಲಿಕ್‌ ನಾಮಪತ್ರ ಸಲ್ಲಿಸುವ ಸಂದರ್ಭ ನೀಡಿರುವಂತಹ ಮಾಹಿತಿ ಪ್ರಕಾರ ಅವರ ಆಸ್ತಿ ವಿವರವನ್ನು ಕ್ರೋಡೀಕರಿಸಲಾಗಿದ್ದು, ಈ ಕೆಳಗಿನಂತಿದೆ:

ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ
ಮೊದಲ ಬಾರಿಗೆ ಕಾರ್ಕಳದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಒಟ್ಟು 38.43 ಕೋ. ರೂ. ಘೋಷಿತ ಆದಾಯ ಹೊಂದಿದ್ದಾರೆ. ಅವರು 31.83 ಕೋ. ರೂ. ಚರಾಸ್ತಿಯನ್ನು ಹೊಂದಿದ್ದರೆ, 6.60 ಕೋ. ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅವರು 7.45 ಕೋಟಿ ರೂ. ಸಾಲ ಸಹ ಹೊಂದಿದ್ದಾರೆ.

ಅವರ ಪತ್ನಿಯ ಒಟ್ಟು ಆದಾಯ 24.16 ಕೋ. ರೂ. ಆಗಿದ್ದು, ಇದರಲ್ಲಿ ಚರಾಸ್ತಿ ಮೌಲ್ಯ 12.28 ಕೋ. ರೂ., ಸ್ಥಿರಾಸ್ತಿ ಮೌಲ್ಯ 11.88 ಕೋ ರೂ.ಗಳಾಗಿವೆ. ಇದರೊಂದಿಗೆ ಪತ್ನಿ ಹೆಸರಿನಲ್ಲಿ 2.94 ಕೋ. ರೂ. ಸಾಲ ಇದೆ. ಉದಯ ಶೆಟ್ಟಿಯವರ ಇಬ್ಬರು ಮಕ್ಕಳ ಹೆಸರಿನಲ್ಲಿ 45.29 ಲ. ರೂ. ಹಾಗೂ 31.96 ಲ. ರೂ. ಆದಾಯವನ್ನು ತೋರಿಸಲಾಗಿದೆ.

ಸರಕಾರದಿಂದ 26 ಕೋ. ರೂ ಬಾಕಿ
ಪಿಡಬ್ಲ್ಯುಡಿ ಕ್ಲಾಸ್ 1 ಗುತ್ತಿಗೆದಾರರಾಗಿರುವ ಉದಯಕುಮಾರ್ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾದ ಕಾಮಗಾರಿ ಮೊತ್ತ 26.15 ಕೋಟಿ ರೂ. ಎಂದು ತೋರಿಸಲಾಗಿದೆ.
ಇದು 2013-14ನೇ ಸಾಲಿನಿಂದ 2019-20ರವೆರೆಗೆ ಉದಯ ಶೆಟ್ಟಿ ಅವರು ಮಾಡಿದ ಸರಕಾರದ ಕಾಮಗಾರಿಗೆ ನೀಡಬೇಕಾದ ಮೊತ್ತವಾಗಿದೆ. 2013-14ರಲ್ಲಿ 22.95 ಲ. ರೂ., 2014-15ರಲ್ಲಿ 1.40 ಕೋ. ರೂ., 2015-16ರಲ್ಲಿ 53.98 ಲ. ರೂ., 2016-17ರಲ್ಲಿ 49.49 ಲ. ರೂ., 2017-18ರಲ್ಲಿ 14.54 ಕೋ. ರೂ., 2018- 19ರಲ್ಲಿ 8.72 ಕೋ. ರೂ. ಹಾಗೂ 2019-20ರಲ್ಲಿ 21.96 ಲ. ರೂ. ಗುತ್ತಿಗೆ ಬಾಕಿ ಉದಯ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾಗಿದೆ. ಇದು ವಿವಾದಿತ ಬಾಕಿಯಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಉದಯ್ ಕುಮಾರ್ ಶೆಟ್ಟಿ ಸರಕಾರದ ವಿರುದ್ಧ ದಾವೆ ಹೂಡಿದ್ದಾರೆ.‌

ವಿ. ಸುನಿಲ್‌ ಕುಮಾರ್‌
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ವಿ. ಸುನಿಲ್ ಕುಮಾರ್ ಅವರ ಒಟ್ಟು ಆದಾಯ ಕಳೆದ ಚುನಾವಣೆಗಿಂತ ತುಸು ಏರಿಕೆಯಾಗಿದೆ. ಅವರ ಒಟ್ಟು ಆಸ್ತಿಯ ಮೊತ್ತ 5.63 ಕೋ. ರೂ. ಗಳಾಗಿವೆ. ಇದರಲ್ಲಿ ಚರಾಸ್ತಿಯ ಮೊತ್ತ 1,59,72,832 ರೂ. ಗಳಾದರೆ, ಸ್ಥಿರಾಸ್ತಿಯ ಮೌಲ್ಯ 4,03,76,000 ರೂ. 2018ರಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅವರು ಸಲ್ಲಿಸಿದ ಅಫಿಡವಿತ್‌ನಲ್ಲಿ ಒಟ್ಟು ಸಂಪತ್ತಿನ ಮೊತ್ತ 2. 22 ಕೋ. ರೂ. ಆಗಿತ್ತು.

ಸುನಿಲ್ ಕುಮಾರ್ ಬಳಿ 18,650 ರೂ. ನಗದು, ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಕಂಪನಿಗಳಲ್ಲಿ ಶೇರು, ಬಾಂಡ್‌ಗಳು ವಿವಿಧ ಪಾಲಿಸಿಗಳು, ಎನ್ಎಸ್ಎಸ್ ಉಳಿತಾಯ, 14.31 ಲ. ರೂ. ಮೌಲ್ಯದ 272.70 ಗ್ರಾಂ ಚಿನ್ನ ಸೇರಿದಂತೆ ಅವರ ಚರಾಸ್ತಿಗಳ ಒಟ್ಟು ಮೌಲ್ಯ 1.59 ಕೋ. ರೂ.ಗಳಾಗಿವೆ. ಅಲ್ಲದೇ ಸುನಿಲ್ ಅವರಲ್ಲಿ 24.60 ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೋವಾ ಕಾರು ಇದೆ.

ಸುನೀಲ್ ಕುಮಾರ್ ಅವರ ಸ್ವಯಾರ್ಜಿತ ಸ್ವತ್ತುಗಳು, ಮನೆ ಸೇರಿದಂತೆ ಇರುವ ಸ್ಥಿರಾಸ್ತಿಯ ಒಟ್ಟು ಮೌಲ್ಯ 4.03 ಕೋಟಿ ರೂ.ಗಳಾಗಿವೆ. ಇದರೊಂದಿಗೆ ಸುನಿಲ್ ಕುಮಾರ್ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆ ಹಾಗೂ ಇತರರಿಂದ 45.15 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ. ಇದರಲ್ಲಿ 15.10 ಲಕ್ಷ ರೂ. ಗೃಹ ಸಾಲವಾದರೆ, 17 ಲಕ್ಷ ಚಿನ್ನ ಸಾಲ ಹಾಗೂ 8.04 ಲಕ್ಷ ವಾಹನ ಸಾಲ ಸೇರಿದೆ.

ಸುನಿಲ್‌ ಕುಮಾರ್‌ ಅವರ ಪತ್ನಿ ಪ್ರಿಯಾಂಕ ಅವರ ಒಟ್ಟು ಆದಾಯ 1,80,51,942 ರೂ.ಗಳಾಗಿವೆ. ಇದರಲ್ಲಿ ಅವರ ಬಳಿ 14,500 ರೂ. ನಗದು ಹಣ, 1.17 ಕೋಟಿ ರೂ. ಮೌಲ್ಯದ 2230 ಗ್ರಾಂ ಚಿನ್ನ, 7.42 ಲಕ್ಷ ರೂ. ಮೌಲ್ಯದ ಬೆಳ್ಳಿ ಸಾಮಾಗ್ರಿ ಸೇರಿದಂತೆ ಇರುವ ಚರಾಸ್ತಿಯ ಒಟ್ಟು ಮೌಲ್ಯ 1.42 ಕೋಟಿ ರೂ. ಗಳಾದರೆ, 37.62 ಲಕ್ಷ ರೂ.ಮೌಲ್ಯದ ಸಿರಾಸ್ಥಿಗಳಿವೆ. ಇವರ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ ಎಂದು ಅಫಿಡವಿತ್‌ನಲ್ಲಿ ತಿಳಿಸಲಾಗಿದೆ. ಸುನಿಲ್ ಕುಮಾರ್ ಅವರ ಕುಟುಂಬದ ಅವಲಂಬಿತರಲ್ಲಿ ತಂದೆ ಎಂ.ಕೆ. ವಾಸುದೇವ ಅವರಲ್ಲಿ 29.13 ಲಕ್ಷ ಮೌಲ್ಯದ ಚರಾಸ್ತಿ ಇದೆ.

2017-18ನೇ ಸಾಲಿನಲ್ಲಿ 23.04 ಲಕ್ಷ ರೂ. ಇದ್ದ ಸುನಿಲ್ ಕುಮಾರ್ ಅವರ ಆದಾಯ 2021-22ನೇ ಸಾಲಿನಲ್ಲಿ ಅದು 51.46 ಲಕ್ಷ ರೂ. ಎಂದು ತೋರಿಸಲಾಗಿದೆ. ಅದೇ ರೀತಿ ಅವರ ಪತ್ನಿ ಪ್ರಿಯಾಂಕ ಅವರ 2017-18ನೇ ಸಾಲಿನ ಆದಾಯ 11.26 ಲಕ್ಷ ರೂ.ಗಳಾಗಿದ್ದು, 2021- 22ನೇ ಸಾಲಿಗೆ ಅದು 24.76ಲಕ್ಷ ರೂ. ಗಳಿಗೆ ಏರಿಕೆ ಕಂಡಿದೆ.

ಸುನಿಲ್‌ ಕುಮಾರ್‌ ವಿರುದ್ಧ ಬಂಟ್ವಾಳದ ಠಾಣೆಯಲ್ಲಿ ಒಂದು ಪ್ರಕರಣ (ಮೊಕದ್ದಮೆ ನಂ.16/2018) ಇದ್ದು, 2018ರ ಜ. 22ರಂದು ಕಲ್ಲಡ್ಕದಲ್ಲಿ ಸಾರ್ವಜನಿಕ ಭಾಷಣದ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಆರೋಪದಲ್ಲಿ ತಿಳಿಸಲಾಗಿದೆ ಎಂದು ಅವರು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸಿದ್ದಾರೆ.

ಪ್ರಮೋದ್‌ ಮುತಾಲಿಕ್‌
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರ ಬಳಿ 2.63 ಲಕ್ಷ ರೂ. ಹಣವಿದೆ. ಇದರಲ್ಲಿ 2.5 ಲಕ್ಷ ಎನ್ಎಸ್ ಬಾಂಡ್‌ನಲ್ಲಿದ್ದರೆ, ಬ್ಯಾಂಕಿನಲ್ಲಿ 3 ಸಾವಿರ ಹಾಗೂ ಕೈಯಲ್ಲಿ 10 ಸಾವಿರ ರೂ. ಹಣವಿದೆ. ಅವರ ಬಳಿ ಸ್ವಂತ ಕಾರಿಲ್ಲ, ಬಂಗಾರವಿಲ್ಲ ಹಾಗೂ ಅವರಿಗೆ ಪತ್ನಿ, ಮಕ್ಕಳು ಇಲ್ಲ. ಮುತಾಲಿಕ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ







































































error: Content is protected !!
Scroll to Top