ಮಂಜುನಾಥ ಪೂಜಾರಿ ಹೆಸರಲ್ಲಿ ಹರಿದಾಡುತ್ತಿದೆ ಎಚ್ಚರಿಕೆ ಪೋಸ್ಟರ್
ಮುನಿಯಾಲು ಉದಯ್‌ಕುಮಾರ್ ಶೆಟ್ಟಿ ಉಮೇದುವಾರಿಕೆಗೆ ತೀವ್ರ ವಿರೋಧ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ದಿನ ಕಳೆದಂತೆ ಜಟಿಲವಾಗುತ್ತಿದೆ. ಈಗ ಮಂಜುನಾಥ ಪೂಜಾರಿ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿಯವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಆದರೆ ಈ ನಡುವೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಪುತ್ರ ಹರ್ಷ ಮೊಯ್ಲಿ ಮಾಡಿರುವ ಒಂದು ಟ್ವೀಟ್ ಮತ್ತು ಮಂಜುನಾಥ ಪೂಜಾರಿ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಒಂದು ಪೋಸ್ಟರ್ ಕಾರ್ಕಳದಲ್ಲಿ ಕಾಂಗ್ರೆಸ್ ಒಳಜಗಳ ಸದ್ಯ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಮಂಜುನಾಥ ಪೂಜಾರಿ ಮತ್ತು ಮುನಿಯಾಲು ತಾವೇ ಅಭ್ಯರ್ಥಿ ಎಂದು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಇಬ್ಬರೂ ಚುನಾವಣೆಗೆ ತಯಾರಿಯನ್ನೂ ಪ್ರಾರಂಭಿಸಿದ್ದಾರೆ. ಮುನಿಯಾಲು ಕಾರ್ಕಳ ನಗರದಲ್ಲಿ ಚುನಾವಣಾ ಕಚೇರಿಯನ್ನು ಪ್ರಾರಂಭಿಸುವ ಸಿದ್ಧತೆ ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯೂ ಇದೆ.
ಇದೇ ವೇಳೆ ಮುನಿಯಾಲು ಉದಯಕುಮಾರ್ ಶೆಟ್ಟಿ ಕೆಲ ತಿಂಗಳ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಶೇ.40 ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಹರ್ಷ ಮೊಯ್ಲಿ ಟ್ವೀಟ್ ಮಾಡಿದ್ದು, ಇದು ಈಗ ಭಾರಿ ವೈರಲ್ ಆಗಿದೆ.
ಶೇ.40 ಕಮಿಷನ್ ಆರೋಪ ಜೋರಾಗಿದ್ದ ವೇಳೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸರಕಾರಿ ಗುತ್ತಿಗೆದಾರರೂ ಆಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿಯವರು ಉಡುಪಿ ಜಿಲ್ಲೆಯಲ್ಲಿ ಶೇ. 40 ಕಮಿಷನ್ ವ್ಯವಹಾರ ಇಲ್ಲ, ನಾವು ಯಾರಿಗೂ ಕಮಿಷನ್ ಕೊಟ್ಟಿಲ್ಲ. ಇಂಥ ಆರೋಪಗಳಿಂದ ಜನರಿಗೆ ಗುತ್ತಿಗೆದಾರರ ಮೇಲೆ ಅಪನಂಬಿಕೆ ಬರುತ್ತದೆ ಎಂಬ ದಾಟಿಯಲ್ಲಿ ಮಾತನಾಡಿದ್ದರು.
ಇದೀಗ ಇದೇ ಹೇಳಿಕೆಯನ್ನು ಉಲ್ಲೇಖಿಸಿ ಇಂಥ ವ್ಯಕ್ತಿ ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಸಾಧ್ಯವೇ? ಇದು ಕಾಂಗ್ರೆಸಿನ ಶೇ.40 ಕಮಿಷನ್ ಆರೋಪದ ಇಡೀ ಉದ್ದೇಶವನ್ನೇ ವಿಫಲಗೊಳಿಸುವುದಿಲ್ಲವೇ ಎಂದು ಹರ್ಷ ಮೊಯ್ಲಿ ಪ್ರಶ್ನಿಸಿದ್ದಾರೆ. ತನ್ನ ಟ್ವೀಟ್‌ಗೆ ಅಂದು ಮುನಿಯಾಲು ನೀಡಿದ್ದ ಹೇಳಿಕೆ ಮತ್ತು ಫೋಟೊ ಲಗತ್ತಿಸಿದ್ದಾರೆ.

ಈ ನಡುವೆ ಮಂಜುನಾಥ ಪೂಜಾರಿ ಹೆಸರಿನಲ್ಲಿ ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗುವ ಮೊದಲು ಪಕ್ಷದ ಹಿರಿಯ ನಾಯಕರ ಭಾವಚಿತ್ರ ಮತ್ತು ಹೆಸರು ಬಳಸಿಕೊಂಡು ಪ್ರಚಾರ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಪೋಸ್ಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಮೇಲೆ ಉದಯಕುಮಾರ್ ಶೆಟ್ಟಿ ಹೆಸರಿನಲ್ಲಿ ಪ್ರಚಾರ ಪ್ರಾರಂಭಿಸಿರುವ ಪೋಸ್ಟರ್ ಲಗತ್ತಿಸಲಾಗಿದೆ. ಈ ಬೆಳವಣಿಗೆಯಿಂದ ಕಾರ್ಕಳ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
























