ಕಾರ್ಕಳ ಕಾಂಗ್ರೆಸ್‌ ಟಿಕೆಟ್‌ ಬಗೆಹರಿಯದ ಕಗ್ಗಂಟು

ಇನ್ನೂ ಅಂತಿಮವಾಗಿಲ್ಲ ಅಭ್ಯರ್ಥಿ – ಗೊಂದಲದಲ್ಲಿ ಕಾರ್ಯಕರ್ತರು

ಕಾರ್ಕಳ : ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹಾಗೂ ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗದೆ ಯಾರಿಗೆ ಟಿಕೆಟ್‌ ಒಲಿಯಲಿದೆ ಎನ್ನುವ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವರಿಷ್ಠರಿನ್ನೂ ಸಹಮತಕ್ಕೆ ಬರದ ಕಾರಣ ಕಾರ್ಕಳ ಟಿಕೆಟ್‌ ಕುರಿತು ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿದೆ. ಅಖಾಡದಲ್ಲಿ ಉದಯ ಶೆಟ್ಟಿ ಮುನಿಯಾಲು ಹಾಗೂ ಮಂಜುನಾಥ ಪೂಜಾರಿಯವರಿದ್ದು, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ದೊರೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಉದಯ ಶೆಟ್ಟಿ ಅವರಿಗೆ ಟಿಕೆಟ್‌ ಅಂತಿಮವಾಗಿದೆ, ಘೋಷಣೆಯಷ್ಟೇ ಬಾಕಿ ಎಂದು ಅವರ ಬಳಗದವರು ಹೇಳುತ್ತಿದ್ದರೆ, ಮಂಜುನಾಥ ಪೂಜಾರಿ ಅವರಿಗೆ ಟಿಕೆಟ್‌ ಕನ್‌ಫರ್ಮ್‌ ಆಗಿದೆ ಎಂದು ಅವರ ಆಪ್ತ ಬಳಗದವರು ಹೇಳುತ್ತಿದ್ದಾರೆ. ಈ ಮಧ್ಯೆ ಡಿ.ಆರ್.‌ ರಾಜು ಅವರೂ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದು, ಅವರು ಟಿಕೆಟ್‌ ದೊರೆಯುವ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಕೆಲವರು ಉದಯ ಶೆಟ್ಟಿ ಅವರ ಪರವಾಗಿದ್ದರೆ ಮತ್ತೆ ಕೆಲವರು ಮಂಜುನಾಥ ಪೂಜಾರಿ ಅವರಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಉದಯ ಶೆಟ್ಟಿ ಅವರು ಬೆಂಗಳೂರು, ದೆಹಲಿ ಮಟ್ಟದಲ್ಲಿ ಪ್ರಭಾವ ಬಳಸಿ ಟಿಕೆಟ್‌ ಪಡೆಯಲು ಯತ್ನಿಸಿದ್ದಾರೆ. ಟಿಕೆಟ್‌ ತನಗೇ ಖಚಿತವೆಂದು ಭಾವಿಸಿರುವ ಮಂಜುನಾಥ ಪೂಜಾರಿ ಅವರು ಈಗಾಗಲೇ ಕಾರ್ಕಳ ಬ್ಲಾಕ್‌ ಕಚೇರಿ ಪೇಂಟಿಂಗ್‌ ಮಾಡಿಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಪ್ರಮುಖರೊಂದಿಗೆ ಮಾತನಾಡುತ್ತಿದ್ದಾರೆ. ಪಕ್ಷದಲ್ಲಿ ಇಬ್ಬರೂ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದು, ಯಾರಿಗೆ ಟಿಕೆಟ್‌ ಫೈನಲ್‌ ಎಂಬ ಪ್ರಶ್ನೆಗೆ ಒಂದೆರಡು ದಿನದಲ್ಲಿ ಉತ್ತರ ದೊರೆಯಲಿದೆ.

ಚುನಾವಣೆಗೆ ಗೆಜೆಟ್ ನೋಟಿಫಿಕೇಷನ್ ಎ. 13ರಂದು ಹೊರಡಿಸಲಾಗಿದೆ. ಎ. 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಎ. 21 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಎ. 24 ಕೊನೆಯ ದಿನವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಎ. 19ರಂದು ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ
ಕಾರ್ಕಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಎ. 19ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

















































error: Content is protected !!
Scroll to Top