ಕಾರ್ಕಳ : ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಎ.12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ಈ ವೇಳೆ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸುನಿಲ್ ಕುಮಾರ್ ಅವರನ್ನು ಆಶೀರ್ವದಿಸಿದರು. ಸುನಿಲ್ ಅವರ ಪತ್ನಿ ಪ್ರಿಯಾಂಕ ಉಪಸ್ಥಿತರಿದ್ದರು.
ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸುನಿಲ್ ಕುಮಾರ್ ಮುಂಜಾನೆ ದೇವರ ದರ್ಶನ ಪಡೆದು ಬಳಿಕ ಸುಬ್ರಮಣ್ಯ ಸಮೀಪದ ದೇವರಗದ್ದೆ ಸ್ವಾಮಿ ಕೊರಗಜ್ಜ ದೈವದ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರು ನಾಮಪತ್ರ ಸಲ್ಲಿಸುವ ಮೊದಲು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.























