ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಬಂಡಾಯದ ಬಿಸಿ ಹೆಚ್ಚಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ನಾಯಕರು ಅಸಮಾಧಾನದ ನಡುವೆ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜನಂದಿನಿ ಪಕ್ಷ ತೊರೆದು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು(ಏ.12) ಬಿಎಸ್ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಬೇಟಿಯಾದ ರಾಜನಂದಿನಿ ಮಾತುಕತೆ ನಡೆಸಿದ್ದು, ಬಿಜೆಪಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ರಾಜನಂದಿನಿಗೆ ಕಾಂಗ್ರೆಸ್ ಟಿಕೆಟ್ ವಂಚಿಸಿತ್ತು. ಇಷ್ಟೇ ಅಲ್ಲ ಕಾಗೋಡು ತಿಮ್ಮಪ್ಪಗೂ ಟಿಕೆಟ್ ನಿರಾಕರಿಸಲಾಗಿತ್ತು. ಸಾಗರದಿಂದ ಕಾಗೋಡು ತಿಮ್ಮಪ್ಪ ಮತ್ತೆ ಸ್ಪರ್ಧಿಸಲು ಸಜ್ಜಾಗಿದ್ದರು. ವಯಸ್ಸಿನ ಕಾರಣದಿಂದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಪುತ್ರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಕಾಗೋಡು ತಿಮ್ಮಪ್ಪ, ಪುತ್ರಿ ರಾಜನಂದಿನಿ ಬದಲು ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡಿದ್ದರು. ಇದರಿಂದ ಕಾಗೋಡು ಹಾಗೂ ರಾಜನಂದಿನಿ ತೀವ್ರ ಅಸಮಾಧಾನಗೊಂಡಿದ್ದರು. ಇದೀಗ ಕಾಂಗ್ರೆಸ್ ತಮ್ಮನ್ನು ಕಡೆಗಣಿಸುತ್ತಿದೆ ಅನ್ನೋ ಅಸಮಾಧಾನವನ್ನು ರಾಜನಂದಿನಿ ಹೊರಹಾಕಿದ್ದ ಅವರು ಬಿಜೆಪಿ ಸೇರ್ಪಡೆಗೊಂಡರು.
ಮಗಳ ನಿರ್ಧಾರದಿಂದ ಬೇಸರಗೊಂಡ ಕಾಗೋಡು
ಮಗಳು ಬಿಜೆಪಿ ಸೇರ್ಪಡೆಯಾಗಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಈ ಕೆಲಸ ಮಾಡಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಪುತ್ರಿ ರಾಜನಂದಿನಿ ಬಿಜೆಪಿ ಸೇರಲು ಹೊರಟಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಈ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಈಗ ವಿಷಯ ಗೊತ್ತಾಯಿತು. ಅವಳು ಈ ರೀತಿ ಮಾಡುತ್ತಾಳೆ ಎಂಬುದನ್ನು ಕನಸಲ್ಲೂ ಯೋಚಿಸಿರಲಿಲ್ಲ. ಇದೆಲ್ಲ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಆ ಸಂತೋಷ, ನೆಮ್ಮದಿ ನನಗೆ ಇದೆ. ಏನೇ ಆಗಲಿ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.
























