ವೈರಲ್ ಆಯಿತು ಕೇಸರಿ ಪಕ್ಷದ ಪ್ರಚಾರದ ಹಾಡು
ಬೆಂಗಳೂರು: ಇನ್ನೊಂದು ತಿಂಗಳು ಬಾಕಿ ಇರುವ ರಾಜ್ಯ ವಿಧಾನಸಭೆ (Assembly Elections) ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು (BJP leaders) ರಣತಂತ್ರಗಳನ್ನು ರೂಪಿಸುತ್ತಿದ್ದು, ಮತದಾರರ ಒಲೈಕೆಗಾಗಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರದಲ್ಲೂ ತನ್ನ ಎಂದಿನ ವೈಶಿಷ್ಟ್ಯವನ್ನು ಮುಂದುವರಿಸಿದೆ. ಂಂಗಳವಾರ ಚುನಾವಣಾ ಪ್ರಚಾರದ ಹಾಡು ಬಿಡುಗಡೆಗೊಳಿಸಿದ್ದು, ಸೂಪರ್‌ಹಿಟ್ ಆರ್‌ಆರ್‌ಆರ್ ಸಿನಿಮಾದ ಆಸ್ಕರ್ ವಿಜೇತ ಹಾಡು ನಾಟು ನಾಟು ದಾಟಿಯಲ್ಲಿ ರಿಮಿಕ್ಸ್ ಮಾಡಿದ ಈ ಹಾಡು ಬಿಡುಗಡೆಯಾದ ಬೆನ್ನಲ್ಲೇ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಾಡಿನಲ್ಲಿ ನಾಟು ನಾಟು ಬದಲಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಕಾರ್ಯಕ್ರಮಗಳನ್ನು ಹೇಳಲಾಗಿದೆ. ಚುನಾವಣಾ ಪ್ರಚಾರದ ಈ ಹಾಡಿನಲ್ಲಿ ಮೂಲ ನಾಟು ನಾಟು ಸಾಹಿತ್ಯದ ಬದಲಾಗಿ ಎಲ್ಲರೂ ಸೇರಿ ಹಾಡಿ ಮೋದಿ ಮೋದಿ ಎಂದು ಬದಲಾಯಿಸಲಾಗಿದೆ. ಯುವಕರು ಈ ಹಾಡಿಗೆ ನೃತ್ಯ ಮಾಡಿದ್ದು, ಮೂಲ ವಿಡಿಯೋದಲ್ಲಿರುವ ‘ನಾಟು ನಾಟು’ ಹಾಡಿಗೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ರೀತಿಯಲ್ಲಿ ಯುವಕರು ಕುಣಿದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮೆಟ್ರೋ ಮಾರ್ಗಗಳು ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಈ ಹಾಡು ವೈರಲ್ ಆಗುತ್ತಿದ್ದು, ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಅವರು ಟ್ವಿಟರ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಡಬಲ್ ಎಂಜಿನ್ ಕರ್ನಾಟಕ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪರ್ವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ @BJYM ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.
ರಾಜಕೀಯ ಪಕ್ಷ ಆಸ್ಕರ್ ಪ್ರಶಸ್ತಿ ವಿಜೇತ ಹಾಡನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವುದು ಇದೇ ಮೊದಲಲ್ಲ. 2009ರಲ್ಲಿ ಸ್ಲಮ್ ಡಾಗ್ ಮಿಲಿಯನೇರ್‌ನ ‘ಜೈ ಹೋ’ ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ, ಕಾಂಗ್ರೆಸ್ ಪಕ್ಷ ಈ ಹಾಡನ್ನು ‘ಜೈ ಹೋ ಕಾಂಗ್ರೆಸ್’ ಎಂದು ರೀಮಿಕ್ಸ್ ಮಾಡಿತ್ತು. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ತಮ್ಮ ಚುನಾವಣಾ ಪ್ರಚಾರದ ಹಾಡು ಅಂತ ಹೇಳಿ ಬಳಸಿಕೊಂಡಿತ್ತು.
























