ಬಿಜೆಪಿ ಬೂತ್‌ ಕಾರ್ಯಕರ್ತರ ಸಮಾವೇಶ

ಕಾರ್ಕಳದ ಋಣ ತೀರಿಸುವಲ್ಲಿ ಪ್ರಾಮಾಣಿಕ ಕಾರ್ಯ – ಸುನಿಲ್‌ ಕುಮಾರ್‌

ಕಾರ್ಕಳ : ಕಳೆದ 5 ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಕಾರ್ಕಳದ ಗೌರವ ಮತ್ತು ಅಭಿಮಾನವನ್ನು ಹೆಚ್ಚಿಸುವಂತಹ ಕಾರ್ಯ ಮಾಡಿದ್ದೇವೆ. ಜನಪ್ರತಿನಿಧಿಯಾಗಿ ಕಾರ್ಕಳದ ಋಣ ತೀರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.
ಅವರು ಎ. 9ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಬಿಜೆಪಿ ಬೂತ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಚುನಾವಣಾ ಸಂದರ್ಭ ನೀಡಿದ ಭರವಸೆಯನ್ನು ಹಂತ ಹಂತವಾಗಿ ಈಡೇರಿಸಿದ್ದೇನೆ. ಈ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇನೆ. ಧಾರ್ಮಿಕ, ಪ್ರವಾಸೋದ್ಯಮ, ರಸ್ತೆ ಕಾಮಗಾರಿ, ಶೈಕ್ಷಣಿಕ, ಆರೋಗ್ಯ, ಕುಡಿಯುವ ನೀರು, ಕೈಗಾರಿಕೋದ್ಯಮ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಕಾರ್ಕಳವನ್ನು ಸ್ವರ್ಣ ಕಾರ್ಕಳವನ್ನಾಗಿ ರೂಪುಗೊಳಿಸಿದ್ದೇವೆ. ಸರಕಾರ ನೀಡಿದಂತಹ ಎರಡೂ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಈ ಎರಡೂ ಇಲಾಖೆಗಳ ಮೂಲಕ ಕಾರ್ಕಳಕ್ಕೆ ಯಕ್ಷರಂಗಾಯಣ, ಕಾರ್ಕಳ ಉತ್ಸವ, ಪರಶುರಾಮ ಥೀಮ್‌ ಪಾರ್ಕ್‌ ಹೀಗೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದೇನೆ. ಹೆಬ್ರಿ ತಾಲೂಕು ರಚನೆಯಾದ ಬಳಿಕ ಅಲ್ಲಿ ತಾಲೂಕು ಸೌಧ, ಪೊಲೀಸ್‌ ಠಾಣೆ ನಿರ್ಮಾಣ ಮತ್ತು ತಾಲೂಕು ಪಂಚಾಯತ್‌ ಕಟ್ಟಡ, ಮೆಸ್ಕಾಂ ಮತ್ತು ಹಾಸ್ಟೆಲ್‌ ಕಟ್ಟಡಗಳು ಸ್ಥಾಪನೆಯಾಗಿದೆ. ಕಾರ್ಕಳದಲ್ಲಿ ನ್ಯಾಯಾಲಯ ಕಟ್ಟಡ, ತಾಲೂಕು ಪಂಚಾಯತ್‌ ಕಟ್ಟಡ, ಅಂಬೇಡ್ಕರ್‌ ಭವನ, ಬಿಇಓ ಕಚೇರಿ, ದೇವರಾಜ್‌ ಅರಸು ಭವನದ ನಿರ್ಮಾಣವಾಗಿದೆ. ಉಭಯ ತಾಲೂಕಿನಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಕಾರ್ಯನಿರ್ವಹಿಸಿದ ತೃಪ್ತಿಯಿದೆ ಎಂದರು.

ಬಿಜೆಪಿ ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿತು. ಪಿಎಫ್ಐ ಬ್ಯಾನ್ ಮಾಡಿತು. ಪ್ರವೀಣ್‌ ನೆಟ್ಟಾರು ಆರೋಪಿಗಳನ್ನು ಜೈಲಿಗಟ್ಟಿದ್ದು ಇದೇ ಡಬಲ್ ಇಂಜಿನ್ ಬಿಜೆಪಿ ಸರಕಾರ. ಹಿಜಾಬ್ ವಿರುದ್ದ ಗಟ್ಟಿ ಧ್ವನಿ ಎತ್ತಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದು ಬಿಜೆಪಿ ಸರಕಾರ. ಬಿಜೆಪಿ ಸರಕಾರ ಇರದೇ ಇದ್ದರೆ ಶಾಲೆ ಶಾಲೆಗೂ ಹಿಜಾಬ್ ಹರಡುತ್ತಿತ್ತು. ಗೋ ಶಾಲೆಗಳ ನಿರ್ಮಾಣ, 370 ವಿಧಿ ಅನುಷ್ಠಾನ, ಅಯೋಧ್ಯೆ ರಾಮ ಮಂದಿರಕ್ಕೆ ಕಾರ್ಕಳದಿಂದ ಗೆ ಕಲ್ಲು ಸಾಗಿಸುವಂತಾಗಿದ್ದು ಬಿಜೆಪಿ ಸರಕಾರದ ಕಾರಣಕ್ಕಾಗಿ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಹಿಂದುತ್ವದ ಪಾಠ ಬೇಡ
ಹಿಂದುತ್ವ ಯಾರಿಗೆ ಹೇಳಬೇಕು ? ಬುದ್ದಿ ಬಂದಂದಿನಿಂದ ಹಣೆಗೆ ಕುಂಕುಮ ಹಚ್ಚಿ, ಮನೆಯಿಂದ ಹೊರಡುವ ಮುನ್ನ ದೇವರಿಗೆ ದೀಪ ಹಚ್ಚಿ ಹೊರಡುವವನು ನಾನು.ಕಳೆದ 25ವರ್ಷದಿಂದ ದತ್ತ ಪೀಠಕ್ಕೆ ತೆರಳುವ ನನಗೆ ಹಿಂದುತ್ವದ ಪಾಠವನ್ನು ಬೇರೆಯವರು ಮಾಡಬೇಕಾಗಿಲ್ಲ. ಹಿಂದುತ್ವ ನನಗೆ ಭಾಷಣ ಅಲ್ಲ. ಅದು ನನಗೆ ಆಚರಣೆ. ಸಂಘ ನನಗೆ ಯಾವ ಪರಿಪಾಠ ನೀಡಿದೆಯೇ ಅದನ್ನು ಇಟ್ಟುಕೊಂಡೆ ಚುನಾವಣೆಗೆ ಹೋಗುವೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಜಾತಿ ನೋಡಿ ಕೆಲಸ ಮಾಡಿಲ್ಲ
ಅಪಪ್ರಚಾರ ಇದೇ ಮೊದಲಲ್ಲ. ಯಾವುದನ್ನು ಚರ್ಚೆಗೆ ತರಲು ಸಾಧ್ಯವಿಲ್ಲ ಅಂತಹ ವಿಷಯಗಳ ಬಗ್ಗೆ ಅಪಪ್ರಚಾರ ಮಾಡಲು ಆರಂಭವಾಗಿದೆ. ಅಭಿವೃದ್ದಿ ಸಹಿಸದ ಕೆಲವು ಮಾನಸಿಕ ವ್ಯಕ್ತಿಗಳು ಕಾರ್ಕಳದಲ್ಲಿ ತಿರುಗುತ್ತಿದ್ದಾರೆ. ಇಂತಹ ಮಾನಸಿಕ ಭ್ರಷ್ಟಾಚಾರಿಗಳ ವಿರುದ್ದ ಎಚ್ಚರಿಕೆಯಿಂದಿರಬೇಕು. ಚುನಾವಣೆಗೆ ಮೂವತ್ತು ದಿನ ಬಾಕಿ ಇದ್ದು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ. ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ಮಾಡುವಾಗ ಜಾತಿ ಯೋಚಿಸಿ ಮಾಡಿಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಾಂತಾರ ಚಿತ್ರದ ಗುಳಿಗನ ಅವತಾರ ತಾಳಿ
ಇವತ್ತು ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಪಕ್ಷ ಅವಕಾಶ ನೀಡಿದಲ್ಲಿ ಎ. 19 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಕಾಂತಾರ ಚಿತ್ರದ ಗುಳಿಗನ ಕೊನೆಯ ಅವತಾರದಂತೆ ಕಾರ್ಯಕರ್ತರು ಪ್ರಚಾರ ಕಾರ್ಯ ಪ್ರಾರಂಭಿಸಬೇಕಾಗಿದೆ ಎಂದು ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡರು.

ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿದೆ
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಚುನಾವಣೆಗೆ ಇನ್ನು 30 ದಿನ ಮಾತ್ರ ಬಾಕಿಯಿದೆ. ಅಭಿವೃದ್ಧಿ ವಿಚಾರದಲ್ಲಿ ಮಾಡಿದಂತಹ ಕಾರ್ಯಗಳೆ ಮಾತನಾಡುತ್ತಿದೆ. ಕೊರೊನಾ ಕರಿಛಾಯೆ ಸಂದರ್ಭ ಸುನಿಲ್‌ ಕುಮಾರ್ ನೇತೃತ್ವದಲ್ಲಿ ಕ್ವಾರಂಟೈನ್‌ ಕೇಂದ್ರಗಳ ಸ್ಥಾಪನೆ, ಔಷಧಿ, ಕಿಟ್‌ ವಿತರಣೆ ಮಾಡುವಲ್ಲಿ‌ ಕಾರ್ಯಕರ್ತರು ಮಾಡಿದಂತಹ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ. ಬಜರಂಗದಳ, ಹಿಂದು ಜಾಗರಣ ವೇದಿಕೆ ಹೀಗೆ ಹಿಂದು ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಅಂದು ಕಾರ್ಯನಿರ್ವಹಿಸಿದ್ದರು. ಅಂತಹ ಸಂಧಿಗ್ದತೆಯ ಸಂದರ್ಭ ಕಾಂಗ್ರೆಸ್‌ ಪಕ್ಷ ನಾಪತ್ತೆಯಾಗಿತ್ತು. ಆದರೆ, ಈಗ ಅವರು ಟೀಕೆಗಳ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಇನ್ನೂ ಕಾಂಗ್ರೆಸ್‌ ʼಬಿʼ ಟೀಮ್ ಅಪಪ್ರಚಾರದಲ್ಲಿ ನಿರತವಾದರೆ ʼಎʼ ಟೀಮ್‌ ಕೈ ಮುಗೀತಾ ಸಾಗುತ್ತಿದೆ. ಕೊರೊನಾದಿಂದಾಗಿ ಕಂಗೆಟ್ಟ ಸಮಾಜದಲ್ಲಿ ಮತ್ತೆ ಜೀವನೋತ್ಸಾಹ ತುಂಬುವ ಕಾರ್ಯ ಕಾರ್ಕಳ ಉತ್ಸವದ ಮೂಲವಾಗಿದೆ ಎಂದರು.

ಟೀಕೆ ಮಾಡುವವರು ಬೇರೆ ಕ್ಷೇತ್ರಕ್ಕೆ ಭೇಟಿ ನೀಡಲಿ
ಕಾರ್ಕಳ ಎರಡು ಮೂರು ತಿಂಗಳಿಂದ ಭಾರಿ ಸುದ್ದಿಯಲ್ಲಿದೆ. ಹಿಂದೆ ಅಭಿವೃದ್ದಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ ಈಗ ಅಪಪ್ರಚಾರದಲ್ಲಿ ಸುದ್ದಿಯಲ್ಲಿದೆ. ಅಭಿವೃದ್ದಿ ಮಾಡಿ ಇಷ್ಟು ಅಪಪ್ರಚಾರ ಕೇಳುವಾಗ ಮನಸ್ಸಿಗೆ ಬಹಳ ಬೇಸರವಾಗುತ್ತಿದೆ. ಏನೂ ಮಾಡದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಬಗ್ಗೆ ಯಾರೂ ಮಾತಾಡುವುದಿಲ್ಲ. ಟೀಕೆ ಮಾಡುವವರು ರಾಜ್ಯದ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿ ಅಲ್ಲೊಮ್ಮೆ ನೋಡಿಕೊಂಡು ಬರಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಲಹೆ ನೀಡಿದರು.

ಬಿಜೆಪಿ ಹಿರಿಯ ಮುಖಂಡರಾದ ಎಂ.ಕೆ. ವಿಜಯ ಕುಮಾರ್‌, ಬೋಳ ಪ್ರಭಾಕರ್‌ ಕಾಮತ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿದರು. ಚುನಾವಣಾ ಉಸ್ತುವಾರಿ ಬಾಹುಬಲಿ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಕಿಣಿ ಪ್ರಾರ್ಥಿಸಿ, ನರಸಿಂಹ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕಾರ್ಯದರ್ಶಿ ಪ್ರಕಾಶ್‌ ರಾವ್‌ ವಂದಿಸಿದರು.









































































































error: Content is protected !!
Scroll to Top