ಅಮುಲ್ – ನಂದಿನಿ ವಿಲೀನ ಬಿಜೆಪಿ ಸರಕಾರದ ಮೋಸದಾಟ – ಬಿಪಿನ್‌ ಚಂದ್ರಪಾಲ್‌

ಕಾರ್ಕಳ : ರಾಜ್ಯ ಮಾರುಕಟ್ಟೆಗೆ ಅಮೂಲ್ ಹಾಲು ಮತ್ತು ಮೊಸರನ್ನು ಹರಿಯ ಬಿಟ್ಟಿರುವುದರ ಹಿಂದೆ ನಮ್ಮ ಕೆಎಂಎಫ್‌- ನಂದಿನಿಯನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಮೋಸದಾಟವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೇಸ್‌ ವಕ್ತಾರ ಬಿಪಿನ್‌ ಚಂದ್ರಪಾಲ್‌ ನಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿ (ಕೆಎಂಎಫ್)ಯ ನಂದಿನಿಯ ಹಾಲು, ಮೊಸರು, ತುಪ್ಪ ಮತ್ತು ಇತರೆ ಉತ್ಪನ್ನಗಳು ವಿಶ್ವಮಾರುಕಟ್ಟೆಯಲ್ಲಿ ಗುರುತಿಸಲ್ಪಟ್ಟಿದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಸುಮಾರು 15,043 ಗ್ರಾಮೀಣ ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ಹೊಂದಿರುವುದಷ್ಟೇ ಅಲ್ಲ ಸುಮಾರು 30 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಸದಸ್ಯತ್ವವನ್ನು ಹೊಂದಿದೆ. ಬಹುಶ ಇದರ ಶ್ರೀಮಂತಿಕೆಯ ಮೇಲೆ ಕಣ್ಣು ಹಾಕಿರುವ ಕೇಂದ್ರ ಸಚಿವ ಅಮಿತ್ ಷಾ ನಂದಿನಿಯನ್ನು ತನ್ನ ರಾಜ್ಯದ ಅಮೂಲಿನ ಗೂಟಕ್ಕೆ ಕಟ್ಟಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿರುವುದು ವಿಷಾದನೀಯ.

ನಂದಿನಿ ಮೊಸರಿನ ಪ್ಯಾಕೇಟ್ ಮೇಲೆ ಹಿಂದಿಯ ದಹಿ ಹೇರಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕೆಎಂಎಫ್‌ನ್ನು ಗುಜರಾತ್ ಕೋ- ಓಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಎರೇಶನ್‌ನಡಿ ತಂದು, ಈಗಾಗಲೇ ಉತ್ತರ ಭಾರತದಲ್ಲಿ ಅನ್ಯ ಸಂಸ್ಥೆಗಳ ಹಾಲಿನ ಆಕ್ರಮಣದಿಂದ ಜರ್ಜರಿತವಾಗಿರುವ ಅಮೂಲ್‌ನ್ನು ದೇಶವ್ಯಾಪಿಗೊಳಿಸುವುದು ಮತ್ತು ಹಾಲು ಉತ್ಪಾದನೆಯಲ್ಲಿಯೂ ಗುಜರಾತ್ ಏಕಸಾಮ್ಯ ಮೆರೆಸುವುದು ಇವರ ಗುರಿಯಾಗಿದೆ. ಕೆಎಂಎಫ್ ರಾಜ್ಯದ ಸಹಕಾರಿ ಸಂಸ್ಥೆಗಳ ಕಾನೂನಿನಡಿ ನೊಂದಾಯಿತ ಸಂಸ್ಥೆ. ಇದನ್ನು ದೇಶದ ಇನ್ನೊಂದು ರಾಜ್ಯ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ಅಥವಾ ಬಹುರಾಜ್ಯ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ವಿಲೀನಗೊಳಿಸುವುದು ಸಹಕಾರಿ ಸಂಸ್ಥೆಗಳ ನಿಯಮಾವಳಿಗಳ ಉಲ್ಲಂಘನೆ ಎನ್ನಬಹುದಾಗಿದೆ. ಇದು ದೇಶದ ಸಹಕಾರಿ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಬಹುಶ ಈ ಘಟನೆ ಲಾಭದಲ್ಲಿದ್ದ ಈ ನಾಡಿನ ಹೆಮ್ಮೆಯ ವಿಜಯ ಬ್ಯಾಂಕನ್ನು ಗುಜರಾತ್ ಮೂಲದ ನಷ್ಟದಲ್ಲಿದ್ದ ಬರೋಡ ಬ್ಯಾಂಕಿನೊಂದಿಗೆ ವಿಲೀನಗೊಳಿಸಿರುವ ಈ ಸರಕಾರದ ಜನ ವಿರೋಧಿ ಪ್ರಕ್ರಿಯೆಯನ್ನು ನೆನಪಿಸುತ್ತದೆ.

ಯಾವುದೇ ಕಾರಣಕ್ಕೂ ನಂದಿನಿಯನ್ನು ಅಮೂಲ್‌ನೊಂದಿಗೆ ವಿಲೀನಗೊಳಿಸದಂತೆ ನೋಡಿಕೊಳ್ಳುವುದು ಈ ಸಹಕಾರಿ ಸಂಸ್ಥೆಯ ಎಲ್ಲ ಸದಸ್ಯರ, ಅಧಿಕಾರಗಳ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ ದುರಾದೃಷ್ಟವಶಾತ್ ಇಲ್ಲಿಯೂ ಪಕ್ಷ ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ಅದನ್ನು ಬೆಂಬಲಿಸುವ ಮೂಲಕ ಸಂಸ್ಥೆಯ ಒಳಗಿದ್ದೇ ನಂದಿನಿಗೆ ವಿಷ ಹಾಕುತ್ತಿರುವುದು ಖಂಡನೀಯ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top